ಶಿರಾಳಕೊಪ್ಪದಿಂದ ಶಿರಸಿಗೆ ಬಂದಿದ್ದ ಲಾರಿಗೆ ಬೆಂಕಿ ತಗುಲಿದೆ. ಪರಿಣಾಮ ಆ ಲಾರಿ ಸುಟ್ಟು ಕರಕಲಾಗಿದೆ.
ಭಾನುವಾರ ಬೆಳಗ್ಗೆ ಹುಲ್ಲು ತುಂಬಿದ ಲಾರಿ ಬದನಗೋಡು ಗ್ರಾ ಪಂ ವ್ಯಾಪ್ತಿಯ ರಂಗಾಪುರ ಮಾರ್ಗವಾಗಿ ಚಲಿಸುತ್ತಿತ್ತು. ರಂಗಾಪುರ ಪ್ರವೇಶಿಸಿದಾಗ ಲಾರಿಗೆ ಬೆಂಕಿ ತಗುಲಿತು. ಪರಿಣಾಮ ಹುಲ್ಲು ಪೂರ್ತಿಯಾಗಿ ಸುಟ್ಟಿತು. ಅಗ್ನಿಯ ಜ್ವಾಲೆ ಇಡೀ ವಾಹನವನ್ನು ಆವರಿಸಿತು.
ಈ ವಿಷಯ ಅರಿತ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದರು. ಅಷ್ಟರೊಳಗೆ ಹುಲ್ಲಿನ ಜೊತೆ ಲಾರಿ ಸುಟ್ಟು ಕಪ್ಪಾಗಿತ್ತು. ಹರಸಾಹಸದಿಂದ ಬೆಂಕಿ ಇನ್ನಷ್ಟು ಹೊತ್ತಿ ಉರಿಯುವುದನ್ನು ತಪ್ಪಿಸಿದರು. ಬೆಂಕಿಯ ಜ್ವಾಲೆಯಿಂದ ಆಗಬಹುದಾದ ಇನ್ನಷ್ಟು ಅಪಾಯವನ್ನು ತಪ್ಪಿಸಿದರು.
ಶಿರಸಿ ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ಕೆಂಪಣ್ಣ ಮಧುಗಿರಿ ಬೆಂಕಿ ಆರಿಸುವ ಕಾರ್ಯಾಚರಣೆಯಲ್ಲಿ ಶ್ರಮಿಸಿದರು. ಅಗ್ನಿ ಅವಘಡಕ್ಕೆ ಕಾರಣ ಗೊತ್ತಾಗಲಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮನೆಯಲ್ಲಿ ಮದ್ಯ ಮಾರಾಟ: ಪೊಲೀಸರಿಂದ ತಡೆ!
ಸಿದ್ದಾಪುರದ ಮಂಡಗಳಲೆ ಜಗನ್ನಾಥ ಮಡಿವಾಳ ಹಾಗೂ ಹಸರಗೋಡಿನ ಹೊಸಗದ್ದೆಯ ವೆಂಕಟೇಶ ನಾಯ್ಕ ತಮ್ಮ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಪೊಲೀಸರು ಅದನ್ನು ತಡೆದಿದ್ದಾರೆ.
ಸಿಪಿಐ ಜೆಬಿ ಸೀತಾರಾಮ ಅವರು ವೆಂಕಟೇಶ ನಾಯ್ಕ ಅವರ ಮನೆ ಮೇಲೆ ದಾಳಿ ನಡೆಸಿದಾಗ ಮನೆ ಮುಂದೆ ಸಾರ್ವಜನಿಕರಿಗೆ ಸರಾಯಿ ವಿತರಿಸುತ್ತಿರುವುದು ಕಾಣಿಸಿತು. ಮನೆಯೊಳಗೆ ವಿವಿಧ ಮದ್ಯದ ಪ್ಯಾಕೇಟುಗಳು ಇದ್ದವು. ಆದರೆ, ಮದ್ಯ ಮಾರಾಟಕ್ಕೆ ಅನುಮತಿ ಪತ್ರ ಮಾತ್ರ ಸಿಗಲಿಲ್ಲ. ಪಿಎಸ್‌ಐ ಅನೀಲ ಬಿ ಎಂ ಅವರು ಜಗನ್ನಾಥ ಮಡಿವಾಳ ಅವರ ಮನೆ ಬಳಿ ತೆರಳಿದಾಗಲೂ ಅಲ್ಲಿ ಕೆಲವರು ಮದ್ಯ ಸೇವನೆಯಲ್ಲಿ ನಿರತರಾಗಿದ್ದರು. ಅವರ ಮನೆಯಲ್ಲಿಯೂ ಸರಾಯಿ ಪ್ಯಾಕೆಟ್ ಸಿಕ್ಕಿದವು. ಈ ಹಿನ್ನಲೆ ಪೊಲೀಸರು ಆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದರು.