ಗೋಕರ್ಣದ ಹಲವು ಕಡೆ ರಸ್ತೆ ಬದಿಯ ಅಂಗಡಿಗಳು ರಸ್ತೆಯನ್ನು ಕಬಳಿಸಿವೆ. ಭಾನುವಾರ ಅಲ್ಲಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ರಸ್ತೆ ಬದಿ ಅಂಗಡಿಕಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಸಿಪಿಐ ಶ್ರೀಧರ ಹಾಗೂ ಪಿಎಸ್‌ಐ ಖಾದರ್ ಭಾಷಾ ಅವರು ಈ ದಿನ ಓಂ ಬೀಚ್ ಕಡೆ ತೆರಳಿದರು. ಅಲ್ಲಿ ರಸ್ತೆಯ ಮೇಲಿದ್ದ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿದರು. ಪ್ರವಾಸಿಗರ ಓಡಾಟಕ್ಕೆ ಅಸಾಧ್ಯವಾಗುವ ರೀತಿ ಅಂಗಡಿಕಾರರು ರಸ್ತೆಯ ಮೇಲೆ ಬಂದಿದ್ದು, ಅದನ್ನು ತೆರವು ಮಾಡಿದರು. ಮತ್ತೆ ಇದೇ ರೀತಿ ರಸ್ತೆ ಅತಿಕ್ರಮಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಓಂ ಕಡಲತೀರಕ್ಕೆ ತೆರಳುವ ಮೆಟ್ಟುಲುಗಳ ಮೇಲೆ ಅಂಗಡಿ ಮುಂಗಟ್ಟುಗಳಿದ್ದು, ಅದನ್ನು ಪೊಲೀಸರು ತೆರವು ಮಾಡಿಸಿದರು. ಕೆಲವರು ಮಳಿಗೆ ತೆರವಿಗೆ ಒಂದು ದಿನದ ಸಮಯ ಕೇಳಿದರು. ಇದಕ್ಕೆ ಒಪ್ಪಿ ಪೊಲೀಸರು ಸಮಯಾವಕಾಶ ನೀಡಿದರು.
`ಗೋಕರ್ಣದ ರಥಬೀದಿ ಸೇರಿ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಸಹ ಅಂಗಡಿಕಾರರು ರಸ್ತೆಗೆ ಬಂದಿದ್ದಾರೆ. ಇಕ್ಕಟ್ಟಾದ ರಸ್ತೆ ಅತಿಕ್ರಮಣವಾಗಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಮುಖ್ಯ ಕಡಲತೀರಕ್ಕೆ ಹೋಗುವ ಕಡೆಯಲ್ಲಿಯೂ ಅತಿಕ್ರಮಣ ತೆರವು ನಡೆಯಬೇಕು’ ಎಂದು ಜನ ಆಗ್ರಹಿಸಿದರು.
ಉಳುವ ಯೋಗಿಗೆ ಜೀವ ಭಯ!
ಹಳಿಯಾಳದ ಚಂದ್ರಕಾ0ತ ಹುಚ್ಚಾಟಿ ಅವರಿಗೆ ಕೆಲವರು ಕೆಟ್ಟದಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ಚಂದ್ರಕಾoತ ಹುಚ್ಚಾಟಿ ಅವರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಏಪ್ರಿಲ್ 2ರಂದು ಕಾಳಗಿನಕೊಪ್ಪದ ಚಂದ್ರಕಾoತ ಹುಚ್ಚಾಟಿ ಅವರು ಕೃಷಿ ಕೆಲಸದಲ್ಲಿದ್ದರು. ವೆಂಕಟಾಪುರದಲ್ಲಿರುವ ಜಮೀನಿಗೆ ತೆರಳಿದ ಅವರು ಅಲ್ಲಿ ಉಳುಮೆ ಮಾಡುತ್ತಿದ್ದರು. ಆಗ, ಸಂಬ್ರಾಣಿಯ ಸಂಬಾಜಿ ಕಸಮಳಗಿ, ಶಿವಾಜಿ ಕಸಮಳಗಿ, ಗುಂಡೊಳ್ಳಿಯ ನಾರಾಯಣ ಬಾಂದುರ್ಗಿ, ವಿಷ್ಣು ಬಾಂದುರ್ಗಿ ಹಾಗೂ ಅಜಮನಾಳದ ಪಿಶಣ್ಣ ಮಿರಾಶಿ ಅಲ್ಲಿಗೆ ಬಂದರು.
`ಈ ಭೂಮಿ ನಮ್ಮದು. ಬಿಟ್ಟು ಹೋಗು’ ಎಂದು ಅವರೆಲ್ಲರು ದಬಾಯಿಸಿದರು. ಆದರೆ, ಅದಕ್ಕೆ ಚಂದ್ರಕಾAತ ಹುಚ್ಚಾಟಿ ಒಪ್ಪಲಿಲ್ಲ. ಹೀಗಾಗಿ ಅವರನ್ನು ಕೆಟ್ಟದಾಗಿ ನಿಂದಿಸಿದರು. ಅದಾದ ನಂತರ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಓಡಿದರು. ಈ ಬಗ್ಗೆ ಕಾಳಗಿನಕೊಪ್ಪದ ಚಂದ್ರಕಾoತ ಹುಚ್ಚಾಟಿ ಊರಿನ ಹಿರಿಯರಿಗೆ ಹೇಳಿದರು. ಅವರ ಸಲಹೆ ಪಡೆದು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಎದುರಾಳಿಗಳ ವಿರುದ್ಧ ದೂರು ದಾಖಲಿಸಿದರು.
ಕಳ್ಳರ ಕೈ ಚಳಕ: ರಿಕ್ಷಾ ಚಾಲಕರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ!
ಕುಮಟಾ ಬಳಿಯ ಗಂಗೆಕೊಳ್ಳದಲ್ಲಿ ನಿಲ್ಲಿಸಿದ್ದ ರಿಕ್ಷಾಗಳ ಮೇಲೆ ಕಳ್ಳರ ಆಕ್ರಮಣ ನಡೆದಿದೆ. ಮೂವರು ರಿಕ್ಷಾ ಚಾಲಕರು ದುಡಿದು ತಂದಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಇದರೊಂದಿಗೆ ಇನ್ನುಳಿದ ಐದು ರಿಕ್ಷಾ ಚಾಲಕರ ಹಣ ಕದಿಯುವ ಪ್ರಯತ್ನ ನಡೆಸಿದ್ದಾರೆ.
ಏಪ್ರಿಲ್ 19ರ ರಾತ್ರಿ 8 ಗಂಟೆಗೆ ಗಂಗೆಕೊಳ್ಳದ ಉಮಾಕಾಂತ ಗೌಡ ಅವರು ಗಂಗೆಕೊಳ್ಳದ ಸರ್ಕಾರಿ ಶಾಲೆಯ ಬಳಿ ತಮ್ಮ ರಿಕ್ಷಾ ನಿಲ್ಲಿಸಿದ್ದರು. ಬೆಳಗ್ಗೆ 8 ಗಂಟೆಯ ಒಳಗೆ ಕಳ್ಳರು ಅವರ ರಿಕ್ಷಾದೊಳಗೆ ಪ್ರವೇಶಿಸಿ ಸ್ಟೇರಿಂಗ್ ಪಕ್ಕದಲ್ಲಿದ್ದ ಪೆಟ್ಟಿಗೆ ಒಡೆದಿದ್ದರು. ಜೊತೆಗೆ ಅಲ್ಲಿದ್ದ 3 ಸಾವಿರ ರೂ ಹಣವನ್ನು ಎಗರಿಸಿದ್ದರು.
ಈ ಕಳ್ಳತನದ ಬಗ್ಗೆ ಉಮಾಕಾಂತ ಗೌಡ ಅವರು ಇನ್ನಿತರ ರಿಕ್ಷಾ ಚಾಲಕರ ಬಳಿ ಹೇಳಿಕೊಂಡರು. ಆಗ ಬಾವಿಕೊಡ್ಲದ ಸಂತೋಷ ಗೌಡ ಅವರು ತಮ್ಮ ರಿಕ್ಷಾದಲ್ಲಿಯೂ ಕಳ್ಳತನ ನಡೆದಿದೆ ಎಂಬ ವಿಷಯ ತಿಳಿಸಿದರು. ಸಂತೋಷ ಗೌಡ ಅವರ ರಿಕ್ಷಾದ ಬಾಕ್ಸ ಒಡೆದ ಕಳ್ಳರು ಅಲ್ಲಿದ್ದ 1500ರೂ ಕದ್ದಿದ್ದರು. ರಮೇಶ ಗೌಡ ಅವರು ಅಲ್ಲಿಗೆ ಆಗಮಿಸಿ ತಮ್ಮ ರಿಕ್ಷಾ ಪೆಟ್ಟಿಗೆಯಲ್ಲಿದ್ದ 1300ರೂ ಕಳ್ಳತನವಾಗಿರುವ ಬಗ್ಗೆ ಅಳಲು ತೋಡಿಕೊಂಡರು.
ಗoಗೆಕೊಳ್ಳದ ಕಮಲಾಕರ ನಾಯ್ಕ, ಬಾವಿಕೊಡ್ಲದ ನಾಗರಾಜ ಗೌಡ, ರಾಘು ಗೌಡ, ತುಳಸು ಗೌಡ ಹಾಗೂ ದೇವರಾಜ ಗೌಡ ಸಹ ಅದೇ ಸ್ಥಳದಲ್ಲಿ ರಿಕ್ಷಾ ನಿಲ್ಲಿಸಿದ್ದರು. ಕಳ್ಳರು ಈ ಎಲ್ಲರ ರಿಕ್ಷಾಗಳ ಮೇಲೆಯೂ ಆಕ್ರಮಣ ನಡೆಸಿದ್ದರು. ಆದರೆ, ಈ ಐವರ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ ಎಗರಿಸಲು ಸಾಧ್ಯವಾಗಿರಲಿಲ್ಲ. ರಿಕ್ಷಾದಲ್ಲಿನ ಹಣ ಕಳ್ಳತನ ಹಾಗೂ ಕಳ್ಳತನ ಪ್ರಯತ್ನದ ಬಗ್ಗೆ ಉಮಾಕಾಂತ ಗೌಡ ಅವರು ಎಲ್ಲರ ಜೊತೆ ಚರ್ಚಿಸಿ, ಪೊಲೀಸ್ ದೂರು ನೀಡಿದರು. ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರಿಗಾಗಿ ಶೋಧ ಮುಂದುವರೆಸಿದ್ದಾರೆ.