ಅವರಿಬ್ಬರು ಫೇಸ್‌ಬುಕ್ ಮೂಲಕ ಪರಿಚಿತರಾದರು. ಅಲ್ಲಿಯೇ ಸ್ನೇಹಿತರಾದರು. ಪರಸ್ಪರ ಪ್ರೀತಿಸಿದರು. ಒಬ್ಬರನ್ನು ಒಬ್ಬರು ಬಿಟ್ಟಿರಲಾರದಷ್ಟು ಮೋಹಕ್ಕೆ ಒಳಗಾದರು. ಕುಟುಂಬದವರನ್ನು ಒಪ್ಪಿಸಿ ಸಪ್ತಪದಿ ತುಳಿದರು. ಇದೆಲ್ಲ ನಡೆದು ಮೂರು ವರ್ಷ ಕಳೆಯುವುಷ್ಟರಲ್ಲಿ ಆಕೆ, ಆತನನ್ನು ಬಿಟ್ಟು ಶಾಶ್ವತವಾಗಿ ದೂರ ಹೋದರು!
ಶಿರಸಿ ನಿಲೇಕಣಿಯ ನವೀನ ಅವರ ಫೇಸ್ಬುಕ್ ಖಾತೆಗೆ ಮುಂಬೈನ ಜ್ಯೋತಿ `ಹಾಯ್’ ಎಂದು ಮೆಸೆಜ್ ಹಾಕಿದ್ದರು. ಆ ಮೆಸೆಜ್ ಮಾತಿನ ರೂಪದಲ್ಲಿ ಬದಲಾಗಿತ್ತು. ಅವರಿಬ್ಬರ ಫೋನ್ ನಂ ವಿನಿಮಯವಾದ ನಂತರ ರಾತ್ರಿಯಿಡೀ ಮಾತನಾಡಿಕೊಂಡಿದ್ದರು. ಇಬ್ಬರಲ್ಲಿಯೂ ಪ್ರೇಮ ಮೊಳಕೆಯೊಡೆದಿದ್ದು, ಮೂರು ವರ್ಷದ ಹಿಂದೆ ಜ್ಯೋತಿ ಹಾಗೂ ನವೀನ್ ಸತಿ-ಪತಿಗಳಾದರು.
ಸಾವಿರಾರು ಕಿಮೀ ದೂರದಿಂದ `ನೀನೇ ಬೇಕು’ ಎಂದು ಶಿರಸಿಗೆ ಬಂದಿದ್ದ ಜ್ಯೋತಿ ಅವರು ಮೊನ್ನೆ ನೇಣಿಗೆ ಶರಣಾಗಿದ್ದಾರೆ. ಆ ಮೂಲಕ ನವೀನ ಅವರನ್ನು ಜ್ಯೋತಿ ಒಂಟಿಯಾಗಿಸಿದ್ದಾರೆ. ಮದುವೆ ಹೊಸ್ತಿಲಿನಲ್ಲಿರುವಾಗ ಸಂತೋಷವಾಗಿಯೇ ಇದ್ದ ಜ್ಯೋತಿ ಈಚೆಗೆ ಮಂಕಾಗಿದ್ದು, ಇದಕ್ಕೆ ಕಾರಣ ಅರೆಯುವ ಮುನ್ನವೇ ಜೀವನ ಅಂತ್ಯಗೊಳಿಸಿಕೊoಡಿದ್ದಾರೆ.
ನವೀನ ಹಾಗೂ ಜ್ಯೋತಿ ಅನ್ಯೋನ್ಯವಾಗಿಯೇ ಇದ್ದರು. ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂಬ ಕೊರಗುಹೊರತುಪಡಿಸಿ ಬೇರೆ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ, ಜೀವನ ಅಂತ್ಯಗೊಳಿಸುವುದೇ ಆ ಕೊರಗು ದೊಡ್ಡ ಕಾರಣವಂತಿರಲಿಲ್ಲ. ಅದಾಗಿಯೂ ಜೀವನಪೂರ್ತಿ ನವೀನರ ಜೊತೆಯಾಗಿರಬೇಕಿದ್ದ ಜ್ಯೋತಿ ದಿಢೀರ್ ಆಗಿ ಸಾವನಪ್ಪಿರುವುದನ್ನು ಅವರ ಕುಟುಂಬಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಮನೆ ಮುಂದೆ ನೇತಾಡುತ್ತಿದ್ದ ಜ್ಯೋತಿ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಯಿತು. ಆಸ್ಪತ್ರೆಗೆ ಸೇರಿಸಿದರೂ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಜ್ಯೋತಿ ಅವರ ಸಾವಿನಲ್ಲಿ ಅವರ ಪಾಲಕರು ಅನುಮಾನವ್ಯಕ್ತಪಡಿಸಿದರು. ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದರು. `ಮಗಳ ಸಾವಿಗೆ ಸ್ಪಷ್ಟ ಕಾರಣ ಕೊಡಿ’ ಎಂದು ಜ್ಯೋತಿ ತಂದೆ ಚೆನ್ನಯ್ಯ ನಾಗ ಪೂಜಾರಿ ಅವಲತ್ತುಕೊಂಡರು.