ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಎಲ್ಲಾ ಮನೆಗಳನ್ನು ಗುರುತಿಸಿ ಅದನ್ನು ನೆಲಸಮ ಮಾಡುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಈ ಕುರಿತು ಅಧಿಕಾರ ನೀಡಿದ್ದು, ಪಂಚಾಯತ ಸಿಬ್ಬಂದಿ ಮೂಲಕ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಗುರುತಿಸುವಂತೆ ಸೂಚನೆ ನೀಡಿದೆ.
2025ರ ಮೇ 13ರಂದು ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರ ಮೂಲಕ ಈ ಸುತ್ತೋಲೆ ಗ್ರಾಮ ಪಂಚಾಯತ ಆಡಳಿತಕ್ಕೆ ಬಂದಿದೆ. `ಕಟ್ಟಡ ನಿರ್ಮಾಣಕ್ಕೂ ಮುನ್ನ ಗ್ರಾಮ ಪಂಚಾಯತ ಪರವಾನಿಗೆ ಪಡೆಯಬೇಕು. ಮನೆಯ ನಕ್ಷೆಗೆ ಅನುಮೋದನೆ ಪಡೆಯಬೇಕು. ಸರ್ಕಾರದ ಎಲ್ಲಾ ಸೂಚನೆ ಪಾಲಿಸುವುದರ ಜೊತೆ ಮನೆ ಕೆಲಸ ಮುಗಿದ ನಂತರವೂ ಪ್ರಮಾಣ ಪತ್ರ ಪಡೆಯಬೇಕು’ ಎಂಬುದು ಸರ್ಕಾರಿ ನಿಯಮ. ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ನಡೆಯುತ್ತಿದ್ದರೆ ಅದನ್ನು ನಿಲ್ಲಿಸಿ ಸರಿಪಡಿಸಬೇಕು ಎಂದು ಸರ್ಕಾರ ಸುತ್ತೋಲೆ ಮೂಲಕ ಹೇಳಿದೆ.
ಇದರೊಂದಿಗೆ ಅಕ್ರಮವಾಗಿ ನಿರ್ಮಿಸಿದ ಮನೆಗೆ ವ್ಯಾಪಾರ-ವಾಣಿಜ್ಯ ವಹಿವಾಟು ನೀಡಲು ಅವಕಾಶ ಕೊಡಬಾರದು. ವಿದ್ಯುತ್ ಸೇರಿ ಯಾವುದೇ ಸೌಕರ್ಯ ಒದಗಿಸಬಾರದು ಎಂದು ಸಹ ಈ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಸುಪ್ರಿಂ ಕೋರ್ಟಿನ ಆದೇಶದ ಅನ್ವಯ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಬೇಕು ಎಂದು ಸರ್ಕಾರ ಹೇಳಿದ್ದು, ಈ ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ. ಅಗತ್ಯವಿದ್ದರೆ ಪೊಲೀಸರ ನೆರವು ಪಡೆಯುವಂತೆ ಗ್ರಾ ಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ.
`ಕಟ್ಟಡ ನೆಲಸಮ ಮಾಡುವ ಮುನ್ನ ಎಲ್ಲಾ ದಾಖಲೆ ಪರಿಶೀಲಿಸಬೇಕು. ಅದಾದ ನಂತರ ನೋಟಿಸ್ ನೀಡಬೇಕು. ಸರ್ಕಾರ, ಸಾರ್ವಜನಿಕ ಸ್ವತ್ತಿನಲ್ಲಿರುವ ಅನಧಿಕೃತ ಕಟ್ಟಡ ತೆರವು ವೇಳೆ ಕಾನೂನು ದುರ್ಬಳಕೆ ಆಗಬರದು. ಜೊತೆಗೆ ಭ್ರಷ್ಟಾಚಾರಕ್ಕೆ ಸಹ ಈ ಸುತ್ತೋಲೆ ಅವಕಾಶಕೊಡಬಾರದು’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಸರ್ಕಾರ ಹೊರಡಿಸಿದ ಸುತ್ತೋಲೆ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ: ಸರ್ಕಾರ ಹೊರಡಿಸಿದ ಸುತ್ತೋಲೆ