ದೀರ್ಘಾವಧಿ ರಜೆಯ ಮೇಲೆ ತೆರಳಿರುವ ಶಿರಸಿ ನಗರಸಭೆ ಪೌರಾಯುಕ್ತರು ಈವರೆಗೂ ಕಚೇರಿಗೆ ಹಾಜರಾಗಿಲ್ಲ. ಶಿರಸಿಯ ಆಡಳಿತ ಸೌಧಕ್ಕೆ ಖಾಯಂ ತಹಶೀಲ್ದಾರರಿಲ್ಲ. ಶಿರಸಿ ಉಪವಿಭಾಗಾಧಿಕಾರಿಗಳಿಗೆ ಭಟ್ಕಳದ ಪ್ರಭಾರವನ್ನು ನೀಡಿರುವುದರಿಂದ ವಾರದ ಎಲ್ಲಾ ದಿನ ಅವರು ಇಲ್ಲಿನ ಕಚೇರಿಯಲ್ಲಿರುವುದಿಲ್ಲ!
ಅಧಿಕಾರಿಗಳಿಲ್ಲದ ಕಾರಣ ಶಿರಸಿಯಲ್ಲಿ ಸರ್ಕಾರಿ ಕಚೇರಿಯ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, `ಯೋಗ್ಯ ಅಧಿಕಾರಿಗಳ ನೇಮಕಾತಿ ನಡೆಯದೇ ಇದ್ದರೆ ಉಗ್ರ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದ್ದಾರೆ. ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಹೋರಾಟ ನಡೆಸಿ ಮೊದಲ ಹಂತದ ಯಶಸ್ಸುಗಳಿಸಿರುವ ಶಿರಸಿಯ ಅನಂತಮೂರ್ತಿ ಹೆಗಡೆ ಇದೀಗ ಇನ್ನೊಂದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಆಡಳಿತ ಅವ್ಯವಸ್ಥೆಯ ಬಗ್ಗೆ ಕಿಡಿಕಾರಿರುವ ಅವರು ಆಡಳಿತ ನಡೆಸಲು ಯೋಗ್ಯ ಅಧಿಕಾರಿಗಳನ್ನು ನೇಮಿಸುವಂತೆ ಬೇಡಿಕೆಯಿಟ್ಟಿದ್ದಾರೆ.
ಶಿರಸಿಯಲ್ಲಿ ಸರಕಾರದ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ಅವರು ಸುದೀರ್ಘ ಪತ್ರ ಬರೆದಿದ್ದಾರೆ. `ಇಲ್ಲಿನ ಯಾವ ಇಲಾಖೆಯಲ್ಲಿಯೂ ಜನರ ಕೆಲಸ ಆಗುತ್ತಿಲ್ಲ. ತಹಶೀಲ್ದಾರ್ ಕಚೇರಿ, ನಗರಸಭೆ ಸೇರಿ ಹಲವು ಕಚೇರಿಗಳಲ್ಲಿನ ಕಡತಗಳು ಮುಂದೆ ಸಾಗುತ್ತಿಲ್ಲ’ ಎಂದವರು ದೂರಿದ್ದಾರೆ. ಇಲ್ಲಿನ ಎಲ್ಲಾ ಸಮಸ್ಯೆ ಬಗೆಹರಿಸಲು ಒಂದು ವಾರದ ಗಡುವು ನೀಡಿರುವ ಅವರು ಸಮಸ್ಯೆ ಸಮಸ್ಯೆಯಾಗಿಯೇ ಉಳಿದರೆ ಮೇ 27ರಿಂದ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
`ಬನವಾಸಿಯಿಂದ ರಾಗಿಹೊಸಳ್ಳಿಯವರೆಗೆ, ದಾಸನಕೊಪ್ಪದಿಂದ ಜಡ್ಡಿಗದ್ದೆಯವರೆಗೆ ವಿಶಾಲವಾದ ವ್ಯಾಪ್ತಿ ಹೊಂದಿದ ಶಿರಸಿಗೆ ಅಗತ್ಯವಿರುವ ಅಧಿಕಾರಿಗಳನ್ನು ನೇಮಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮಳೆಗಾಲದ ಮುನ್ಸೂಚನೆಯಿದ್ದರೂ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಲು ಹಿರಿಯ ಅಧಿಕಾರಿಗಳಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಆಕ್ರೋಶವ್ಯಕ್ತಪಡಿಸಿದರು.
`ಶಿರಸಿ ನಗರದಲ್ಲಿಯೇ ಸಾಕಷ್ಟು ಸಮಸ್ಯೆಗಳಿವೆ. ಅನೇಕ ಮನೆಗಳು ಮುರಿದು ಬೀಳುವ ಸ್ಥಿತಿಯಲ್ಲಿದೆ. ರಸ್ತೆ-ಚರಂಡಿ ಸಮಸ್ಯೆ ಬಗೆಹರಿಸುವವರಿಲ್ಲ. ತಹಶೀಲ್ದಾರ್ ಇಲ್ಲದಿರುವ ಕಾರಣ ಸಮಸ್ಯೆ ಹೇಳಿಕೊಳ್ಳಲು ಉಪವಿಭಾಗಾಧಿಕಾರಿ ಕಚೇರಿಗೆ ಹೊದರೆ ಅಲ್ಲಿ ಎಸಿ ಸಹ ಸಿಗುವುದಿಲ್ಲ. ಇಲ್ಲಿನ ಉಪವಿಭಾಗಾಧಿಕಾರಿಗಳಿಗೆ ಭಟ್ಕಳದ ಹೊಣೆ ನೀಡಿರುವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ’ ಎಂದವರು ವಿವರಿಸಿದರು.
ಅನಂತಮೂರ್ತಿ ಅವರ ಹೋರಾಟಕ್ಕೆ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಬೆಂಬಲವ್ಯಕ್ತಪಡಿಸಿದರು. ಪ್ರಮುಖರಾದ ರಾಘವೇಂದ್ರ ನಾಯ್ಕ, ಶೋಭಾ ನಾಯ್ಕ, ವಿ ಎಂ ಹೆಗಡೆ, ಶ್ರೀಪಾದ್ ಹೆಗಡೆ, ಪ್ರಭಾವತಿ ಗೌಡ, ಅಂಕಿತ್ ಹೆಗಡೆ, ಅನಸೂಯಾ ಹೆಗಡೆ, ಶಿವಾನಂದ್ ದೇಶಳ್ಳಿ, ವಿಶ್ವನಾಥ್ ಗೌಡ, ಕಮಲಾಕರ ಜಿ ನಾಯ್ಕ ನಾರಾಯಣ ಹೆಗಡೆ, ಸುಬ್ರಾಯ ಹೆಗಡೆ, ರಾಘವೇಂದ್ರ ದೇವಾಡಿಗ, ಜ್ಯೋತಿ ಹೆಗಡೆ, ಸಚಿನ್ ಎಸ್ ಭಟ್ ಅವರು ಮುಂದಿನ ಹೋರಾಟದಲ್ಲಿ ಜೊತೆಯಾಗುವುದಾಗಿ ವಾಗ್ದಾನ ಮಾಡಿದರು.