`ಕರಾಳ ಕೃಷಿ ಕಾಯ್ದೆಗಳ ರದ್ದತಿ, ಬಲವಂತದ ಭೂ ಸ್ವಾಧೀನಕ್ಕೆ ತಡೆ, ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ರಕ್ಷಣೆ, ಸಂವಿಧಾನ ಹಕ್ಕುಗಳ ಖಾತರಿ ಸೇರಿ ವಿವಿಧ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಆಡಳಿತದಂತೆಯೇ ವರ್ತಿಸುತ್ತಿದೆ. ಕೋಮುವಾದಿ ಕೃತ್ಯಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಿಲ್ಲ. ರೈತರಿಗೆ ಬೆಂಬಲ ಬೆಲೆ ರಕ್ಷಣೆಯ ಆಶ್ವಾಸನೆಯೂ ಈಡೇರಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಗುಡುಗಿದ್ದಾರೆ.
`ಈ ಹಿಂದೆ ಬಿಜೆಪಿ ಸರ್ಕಾರ ಅನುಸರಿಸಿದ್ದ ನೀತಿಗಳನ್ನು ಇದೀಗ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಕಾರ್ಮಿಕರ ದುಡಿಮೆ ಅವಧಿಯನ್ನು 8 ಗಂಟೆಯಿoದ 12 ಗಂಟೆಗೆ ಏರಿಕೆಯಾಗಿದ್ದು, ಕಾಂಗ್ರೆಸ್ ಸರ್ಕಾರ ಆ ಕ್ರಮವನ್ನು ರದ್ಧುಪಡಿಸಿಲ್ಲ. ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರ ಭೂಮಿ ಹಕ್ಕು ಕೋರಿರುವ ಅರ್ಜಿಯ ಬಗ್ಗೆ ಚಿಂತನೆ ನಡೆಸಿಲ್ಲ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಮೂಲಕ ನಡೆಯುವ ದೌರ್ಜನ್ಯ ತಪ್ಪಿಲ್ಲ’ ಎಂದು ಶಾಂತರಾಮ ನಾಯಕ ಕಿಡಿಕಾರಿದ್ದಾರೆ.
`ಬಂಡವಾಳ ಹೂಡಿಕೆ ಸಮಾವೇಶದ ಮೂಲಕ ಕೃಷಿಭೂಮಿಯ ದುರ್ಬಳಕೆ ನಡೆದಿದೆ. ಕೃಷಿ ಮಾರುಕಟ್ಟೆಗಳು ಅವ್ಯವಸ್ಥೆಯ ಹಾದಿ ಹಿಡಿದಿದೆ. ಸ್ಮಾರ್ಟ ಮೀಟರ್ ಹೆಸರಿನಲ್ಲಿ ವಿದ್ಯುತ್ ಖಾಸಗಿಕರಣ ನಡೆದಿದೆ. ಕಾರ್ಮಿಕರ ಮೇಲೆ ಹೆಚ್ಚುವರಿ ಕೆಲಸದ ಒತ್ತಡ ಬಿದ್ದಿದ್ದು ಅವರಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ದೊರೆಯುತ್ತಿಲ್ಲ. ಅತಿಥಿ ಶಿಕ್ಷಕರ ನೇಮಕಾತಿಗೆ ನಾನಾ ನಿಯಮ ಒಡ್ಡಲಾಗಿದೆ. ದಲಿತರು, ಮಹಿಳೆಯರು, ಮಕ್ಕಳು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ’ ಎಂದವರು ದೂರಿದ್ದಾರೆ.
`ಕೋಮುವಾದಿ ಹಾಗೂ ಮೂಲಭೂತ ವಾದಿ ಶಕ್ತಿಗಳ ಉಪಟಳಗಳನ್ನು ಹಿಮ್ಮೆಟ್ಟಿಸಲು ಸರ್ಕಾರ ಮುಂದಾಗಿಲ್ಲ. ಸಾವಿರಾರು ಸಮಸ್ಯೆಯಿದ್ದರೂ ರಾಜ್ಯ ಸರ್ಕಾರ ಸಾಧನಾ ಸಮಾವೇಶಕ್ಕೆ ಸಿದ್ಧವಾಗಿದೆ. ಇದನ್ನು ಪ್ರಶ್ನಿಸಿ ಮೇ 20ರಂದು ಜನಾಗ್ರಹ ಸಮಾವೇಶ ನಡೆಸಲಾಗುತ್ತದೆ. ಸಮಸ್ಯೆಗಳ ಕುರಿತು ಅಲ್ಲಿ ಚರ್ಚಿಸಲಾಗುತ್ತದೆ’ ಎಂದವರು ವಿವರಿಸಿದ್ದಾರೆ.