ಸರ್ಕಾರದ ನಿಯಮಗಳ ಪ್ರಕಾರ ಪ್ರತಿಯೊಂದು ಹೊಟೇಲುಗಳಲ್ಲಿಯೂ ಬಿಸಿ ನೀರು ಹಾಗೂ ಕುಡಿಯುವ ನೀರನ್ನು ಉಚಿತವಾಗಿ ಕೊಡಬೇಕು. ಆದರೆ, ಅನೇಕ ಕಡೆ ಉಚಿತ ನೀರು ಪೂರೈಸಿದೇ ಬಾಟಲಿ ನೀರು ಖರೀದಿಸುವ ಅನಿವಾರ್ಯತೆ ಸೃಷ್ಠಿಸಲಾಗುತ್ತಿದೆ. ಈ ಬಗ್ಗೆ ಶಿರಸಿಯ ಆಯುರ್ವೇದ ವೈದ್ಯ ಡಾ ರವಿಕಿರಣ ಪಟವರ್ಧನ್ ಅವರು ಧ್ವನಿ ಎತ್ತಿದ್ದಾರೆ.
ಆಹಾರ ಪೂರೈಸುವ ಪ್ರತಿಯೊಂದು ಮಳಿಗೆ ಮತ್ತು ಹೋಟೆಲಿನಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯಗೊಳಿಸುವಂತೆ ಅವರು ಪೌರಾಡಳಿತ ಸಚಿವರಿಗೆ ಪತ್ರ ಬರೆದಿದ್ದಾರೆ. ಮೂಲಭೂತ ಹಕ್ಕಿಗೆ ವಿರುದ್ಧವಾಗಿ ಕೆಲ ಹೊಟೇಲುಗಳು ವರ್ತಿಸುತ್ತಿರುವ ಬಗ್ಗೆ ಅವರು ಗಮನಸೆಳೆದಿದ್ದಾರೆ.
`ರಸ್ತೆ ಬದಿಯ ಸಣ್ಣ ಹೊಟೇಲು, ಗೂಡಂಗಡಿಗಳಲ್ಲಿ ಉಚಿತ ನೀರು ಪೂರೈಕೆ ವ್ಯವಸ್ಥೆಯಿದೆ. ಆದರೆ, ಪ್ರತಿಷ್ಠಿತ ಹೊಟೇಲುಗಳಲ್ಲಿ ಕಡ್ಡಾಯವಾಗಿ ಬಾಟಲಿ ನೀರು ನೀಡಲಾಗುತ್ತದೆ. ಸಣ್ಣ ಹೊಟೇಲಿನಲ್ಲಿ ಸಿಗುವ ಗೌರವ, ಆತ್ಮೀಯತೆ ದೊಡ್ಡ ದೊಡ್ಡ ಹೊಟೇಲುಗಳಲ್ಲಿ ಸಿಗುತ್ತಿಲ್ಲ. ಇಂಥ ಪ್ರತಿಷ್ಠಿತ ಆಹಾರ ಪೂರೈಕೆಯ ವಾಣಿಜ್ಯ ಮಳಿಗೆಗಳಿಗೆ ಸೇವೆಯ ಬಗ್ಗೆ ಪಾಠ ಮಾಡಬೇಕು’ ಎಂದವರು ಒತ್ತಾಯಿಸಿದ್ದಾರೆ.
`ಕುಡಿಯಲು ನೀರು ಬೇಕಾದರೆ ದುಡ್ಡು ಕೊಟ್ಟು ಖರೀದಿಸಬೇಕು’ ಎಂದು ಹೊಟೇಲಿನವರು ಹೇಳುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ಮತ್ತು ಮೌಲ್ಯಗಳ ಪರಿಪಾಲನೆಗಾಗಿ ಆಹಾರ ಮಳಿಗೆಗಳಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯವಾಗಬೇಕು. ನೀರಿನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಸರಿಯಾದ ನಿಯಮಾವಳಿ ಜಾರಿ ಮಾಡುವುದರ ಜೊತೆ ಅಧಿಕಾರಿಗಳಿಗೆ ಸ್ಪಷ್ಟ ನಿದರ್ಶನ ನೀಡಬೇಕು’ ಎಂದವರು ಆಗ್ರಹಿಸಿದ್ದಾರೆ.