ಯಲ್ಲಾಪುರ ಹಾಗೂ ಅಂಕೋಲಾದ ಜೀವನದಿಯಾದ ಬೇಡ್ತಿ-ಗಂಗಾವಳಿ ನದಿಯಲ್ಲಿ ಇದೀಗ ಕೋಲಾಹಲ ಸೃಷ್ಠಿಯಾಗಿದೆ. ನದಿಯಲ್ಲಿನ ಜಲಚರಗಳು ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪುತ್ತಿವೆ.
ಧಾರವಾಡದ ದಕ್ಷಿಣ ಭಾಗದಲ್ಲಿರುವ ಸೋಮೇಶ್ವರ ದೇಗುಲದ ಬಳಿ ಈ ನದಿ ಹುಟ್ಟುತ್ತದೆ. 152ಕಿಮೀ ಹರಿದು ಈ ನದಿ ಸಮುದ್ರ ಸೇರುತ್ತದೆ. ಈ ನಡುವೆ ಯಲ್ಲಾಪುರದಲ್ಲಿ ಮಾಗೋಡು ಜಲಪಾತವನ್ನು ಸೃಷ್ಠಿಸಿದೆ. ಯಲ್ಲಾಪುರದಲ್ಲಿ ಈ ನದಿಗೆ ಬೇಡ್ತಿ ಎಂದು ಕರೆಯುತ್ತಾರೆ. ಅಂಕೋಲಾದ ಕಡೆ ಇದಕ್ಕೆ ಗಂಗಾವಳಿ ಎನ್ನುತ್ತಾರೆ. ಅನೇಕರು ಈ ನದಿ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಮೀನುಗಾರಿಕೆ ಹಾಗೂ ತೋಟಕ್ಕೆ ನೀರುಣಿಸಲು ಹಲವರಿಗೆ ಈ ನದಿಯೇ ಆಧಾರವಾಗಿದೆ.
ಯಲ್ಲಾಪುರ ಅಂಕೋಲಾ ಗಡಿಭಾಗವಾದ ಗುಳ್ಳಾಪುರ-ರಾಮನಗುಳಿ ಪ್ರದೇಶದಲ್ಲಿ ನದಿ ಅಂಚಿನಲ್ಲಿ ಜಲಚರಗಳು ಸಾವನಪ್ಪಿರುವುದು ಗೊತ್ತಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಮೀನು, ಕಪ್ಪೆಗಳು ಸಾವನಪ್ಪಿವೆ. 4-5 ಕೆಜಿಯ ಮೀನುಗಳು ದಡದ ಅಂಚಿಗೆ ಬಂದು ಬಿದ್ದಿವೆ. ಈ ಸಾವಿಗೆ ನಿಖರ ಕಾರಣ ಗೊತ್ತಾಗದಿದ್ದರೂ ನಾನಾ ಬಗೆಯ ಅನುಮಾನಗಳು ವ್ಯಕ್ತವಾಗಿದೆ.
ಹುಬ್ಬಳ್ಳಿ ತ್ಯಾಜ್ಯ ಹಾಗೂ ರಾಸಾಯನಿಕವನ್ನು ನೇರವಾಗಿ ನದಿಗೆ ಬಿಟ್ಟಿರುವ ಸಾಧ್ಯತೆಯ ಬಗ್ಗೆ ಅನೇಕರು ಹೇಳಿಕೊಂಡಿದ್ದಾರೆ. ದುಷ್ಕರ್ಮಿಗಳು ವಿಷ ಪ್ರಾಶನನಡೆಸಿ ಮೀನು ಭೇಟೆಗೆ ಬಂದಿರುವ ಬಗ್ಗೆಯೂ ಅಂದಾಜಿಸಲಾಗಿದೆ. ಸದ್ಯ ನದಿ ಅಂಚಿನಲ್ಲಿ ಕುರುಡ್ಯಾ, ಕಮೀನು, ಸಿಗಡಿ ಸೇರಿ ಬಗೆ ಬಗೆಯ ಮೀನುಗಳು ಬಿದ್ದಿವೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವ ಕಾರಣ ಮೀನುಗಳು ದಡಕ್ಕೆ ಬಂದು ಸಾವನಪ್ಪುತ್ತಿವೆ.
ಜಲಚರಗಳ ಅನುಮಾನಾಸ್ಪದ ಸಾವಿನ ಬಗ್ಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಅಧಿಕಾರಿಗಳ ಗಮನಸೆಳೆದಿದ್ದಾರೆ. ಈ ಹಿನ್ನಲೆ ಆರೋಗ್ಯ ಇಲಾಖೆಯವರು ಶುಕ್ರವಾರ ನದಿ ನೀರಿನ ಪರಿಶೀಲನೆ ನಡೆಸಿದ್ದಾರೆ. ನದಿ ನೀರಿನ ಮಾದರಿ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. `ಜನಶಕ್ತಿ ವೇದಿಕೆಯಿಂದಲೂ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುತ್ತದೆ’ ಎಂದು ಮಾಧವ ನಾಯಕ ಅವರು ಹೇಳಿದ್ದಾರೆ.