33 ವರ್ಷಗಳಿಂದ ಕಾಡು ಸುತ್ತಿ ಅರಣ್ಯ ಹೋರಾಟ ನಡೆಸುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಇದೀಗ ಮಹಿಳೆಯರಿಗಾಗಿ ಪ್ರತ್ಯೇಕ ಘಟಕ ಸ್ಥಾಪಿಸುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಗೆ 32,513 ಸದಸ್ಯರಿದ್ದಾರೆ. ಆ ಪೈಕಿ 23,817 ಅರಣ್ಯವಾಸಿಗಳು ಗುರುತಿನ ಪತ್ರ ಪಡೆದಿದ್ದಾರೆ. 919 ಹೋರಾಟಗಾರರು ನಾಯಕತ್ವದ ಹೊಣೆ ಹೊತ್ತಿದ್ದು, ಇದೀಗ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ನೀಡುವುದಕ್ಕಾಗಿ ಹೊಸ ಘಟಕ ಸ್ಥಾಪನೆಗೆ ಸಿದ್ಧತೆ ನಡೆದಿದೆ.
ಹೋರಾಟಗಾರರ ವೇದಿಕೆ ಅಡಿ ಈಗಾಗಲೇ ನಾಲ್ಕು ಘಟಕಗಳಿದ್ದು, ಸದ್ಯ ಐದನೇ ಘಟಕದ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿದೆ. ಮಹಿಳೆಯರ ವಿಚಾರ ವಿನಿಮಯ, ವೈಯಕ್ತಿಕ ಜವಾಬ್ದಾರಿ ಹೆಚ್ಚಳ ಉದ್ದೇಶದಿಂದ ಮಹಿಳೆಯರಿಗಾಗಿ ಪ್ರತ್ಯೇಕ ಘಟಕ ಸ್ಥಾಪನೆಗೆ ಹೋರಾಟಗಾರರ ವೇದಿಕೆ ಆಸಕ್ತಿವಹಿಸಿದೆ. ಯುವ ಘಟಕ, ಕಾನೂನು ಘಟಕ, ಸಂಘಟನಾ ಘಟಕ, ಪ್ರಚಾರ ಘಟಕದ ಜೊತೆ ಇನ್ಮುಂದೆ ಮಹಿಳಾ ಘಟಕ ಸಹ ಕಾರ್ಯನಿರ್ವಹಿಸಲಿದೆ.
ಮೇ 24ರಂದು ಬೆಳಗ್ಗೆ 10 ಗಂಟೆಗೆ ಶಿರಸಿಯ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಮಹಿಳಾ ಘಟಕ ಉದ್ಘಾಟನೆ ನಡೆಯಲಿದೆ. ಹೋರಾಟಗಾರರ ವೇದಿಕೆಯ ರಾಜ್ಯ ಪ್ರದಾನ ಸಂಚಾಲಕಿ ಹಾಗೂ ನ್ಯಾಯವಾದಿ ರಂಜಿತಾ ರವೀಂದ್ರ ಅವರು ಈ ವೇಳೆ ಮಹಿಳಾ ಘಟಕದ ಕುರಿತು ಮಾತನಾಡಲಿದ್ದಾರೆ.