ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಬಿಜೆಪಿ ನಾಯಕ ಪ್ರಮೋದ ಮದ್ವರಾಜ್ ಅವರ ಕಾಲಿಗೆ ಬಿದ್ದಿದ್ದಾರೆ. ಅಧಿಕಾರದಲ್ಲಿರುವ ನಾಯಕರು ಎದುರಾಳಿ ಪಕ್ಷದ ಮುಖಂಡರ ಕಾಲಿಗೆ ಬೀಳುವುದು ರಾಜಕೀಯ ವಿದ್ಯಮಾನದಲ್ಲಿ ಅಪರೂಪದಲ್ಲಿಯೇ ಅಪರೂಪದ ದೃಶ್ಯ!
ಮೊನ್ನೆ ಉಡುಪಿಯಲ್ಲಿ ನಡೆದ ಸಮಾವೇಶಕ್ಕೆ ಬಿಜೆಪಿ ಮುಖಂಡ ಪ್ರಮೋದ ಮದ್ವರಾಜ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಆ ಕಾರ್ಯಕ್ರಮಕ್ಕೆ ಹೋಗಿದ್ದರು. ಪ್ರಮೋದ ಮದ್ವರಾಜ್ ಅವರು ಕಾರಿನಿಂದ ಇಳಿದ ಕೂಡಲೇ ಅಲ್ಲಿಗೆ ಧಾವಿಸಿದ ಮಂಕಾಳು ವೈದ್ಯ ಅವರು ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಈ ವೇಳೆ ಪ್ರಮೋದ ಮದ್ವರಾಜ್ ಅವರು ಮಂಕಾಳು ವೈದ್ಯ ಅವರ ಕೈ ಹಿಡಿದು ಪೂರ್ಣ ಪ್ರಮಾಣದಲ್ಲಿ ಕಾಲಿಗೆ ಬೀಳುವುದನ್ನು ತಡೆದರು.
ಬಿಜೆಪಿ ಮುಖಂಡ ಪ್ರಮೋದ ಮಧ್ವರಾಜ್ ಅವರು ಈ ಹಿಂದೆ ಮೀನುಗಾರಿಕಾ ಸಚಿವರಾಗಿದ್ದರು. ಸದ್ಯ ಮಂಕಾಳು ವೈದ್ಯ ಅವರು ಮೀನುಗಾರಿಕಾ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರು ಒಂದೇ ಇಲಾಖೆಯಲ್ಲಿ ಕೆಲಸ ಮಾಡಿರುವುದರಿಂದ ಇಲಾಖೆಯಲ್ಲಿನ ಆಳ-ಅಗಲವನ್ನು ಬಲ್ಲವರಾಗಿದ್ದಾರೆ. ಮಂಕಾಳು ವೈದ್ಯ ಹಾಗೂ ಪ್ರಮೋದ ಮದ್ವರಾಜ್ ಬೇರೆ ಬೇರೆ ಪಕ್ಷದಲ್ಲಿದ್ದರೂ ವೈರತ್ವ ಹೊಂದಿಲ್ಲ. ಅವರಿಬ್ಬರ ನಡುವೆ ವಾಗ್ವಾದ-ಜಟಾಪಟಿ ನಡೆದ ನಿದರ್ಶನಗಳು ಇಲ್ಲ. ಅವರಿಬ್ಬರ ಕ್ಷೇತ್ರ ಬೇರೆ ಬೇರೆಯಾಗಿದ್ದರಿಮದ ಚುನಾವಣಾ ರಾಜಕೀಯದಲ್ಲಿಯೂ ಅವರ ನಡುವೆ ವೈಮನಸ್ಸು ಕಾಣಿಸಿಲ್ಲ.
`ಮಂಕಾಳು ವೈದ್ಯ ಅವರಿಗಿಂತ ಪ್ರಮೋದ ಮದ್ವರಾಜ್ ಅವರು 4 ವರ್ಷ ಹಿರಿಯರು. ಹಿರಿಯರಾದ ಕಾರಣ ಗೌರವ ಸೂಚಿಸುವುದಕ್ಕಾಗಿ ಮಂಕಾಳು ವೈದ್ಯ ಅವರು ಪ್ರಮೋದ ಮದ್ವರಾಜ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ’ ಎಂದು ಕೆಲವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಈ ನಡುವೆ `ಬಿಜೆಪಿ-ಕಾಂಗ್ರೆಸ್ ನಡುವೆ ನಿತ್ಯ ಕಚ್ಚಾಟ ನಡೆಯುತ್ತಿದ್ದು, ಈ ಅವಧಿಯಲ್ಲಿ ಮಂಕಾಳು ವೈದ್ಯ ಅವರು ಬಿಜೆಪಿಗರ ಕಾಲಿಗೆ ಬೀಳುವುದು ಸರಿಯಲ್ಲ’ ಎಂಬ ಅನಿಸಿಕೆಗಳು ವ್ಯಕ್ತವಾಗಿದೆ. ಸಾರ್ವಜನಿಕವಾಗಿ ಬಿಜೆಪಿಗನ ಕಾಲಿಗೆ ಬಿದ್ದ ಮಂಕಾಳು ವೈದ್ಯ ಅವರ ನಡೆಯನ್ನು ಕೆಲ ಕಾಂಗ್ರೆಸ್ಸಿಗರು ಕಟುವಾಗಿ ಟೀಕಿಸಿದ್ದಾರೆ.