ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ.
ಮಳೆಯ ಅಬ್ಬರಕ್ಕೆ ಕುಮಟಾ-ಸಿದ್ದಾಪುರ ರಸ್ತೆ ಬಂದ್ ಆಗಿದೆ. ಶಿರಸಿ-ಮುಂಡಗೋಡು ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಶಿರಸಿಯ ಹಣ್ಣಿನ ಅಂಗಡಿ ಮೇಲೆ ಮರ ಮುರಿದು ಬಿದ್ದಿದೆ. ಕರಾವಳಿ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ತಲುಪಬೇಕಾದ ಸ್ಥಳಕ್ಕೆ ತಲುಪಲಾಗದೇ ವಾಹನ ಸವಾರರು ಪರದಾಡುತ್ತಿದ್ದಾರೆ.
ಕುಮಟಾ, ಶಿರಸಿ, ಅಂಕೋಲಾ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಗುಡುಗು-ಸಿಡಿಲಿನ ಅಬ್ಬರವೂ ಜೋರಾಗಿದೆ. ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಮೊದಲು ಎರಡು ದಿನಗಳ ಕಾಲ ರೆಡ್ ಅಲರ್ಟ ಘೋಷಿಸಲಾಗಿದ್ದು, ಇದೀಗ ಅದನ್ನು ಮುಂದುವರೆಸಲಾಗಿದೆ.
ನೀರು ನುಗ್ಗುವ ಆತಂಕ:
ಮಳೆಗಾಲದ ಪೂರ್ವ ಸಿದ್ಧತೆಗೆ ಮಾಡಿಕೊಳ್ಳುವ ಮುನ್ನ ಮಳೆ ಶುರುವಾಗಿದ್ದರಿಂದ ನಗರ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಾಗಿದೆ. ಅನೇಕ ಕಡೆ ಚರಂಡಿ ನೀರು ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದೆ. ಇದರೊಂದಿಗೆ ಸಾಂಕ್ರಾಮಿಕ ರೋಗ ಭೀತಿಯಿಂದ ಜನ ಭಯಗೊಂಡಿದ್ದಾರೆ.