ಗೋಕರ್ಣದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಸಕ್ತಿವಹಿಸಿದ್ದಾರೆ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ರಾಜ್ಯ ಸರ್ಕಾರ ಖಾಯಂ ಅಧಿಕಾರಿಗಳನ್ನೇ ನೇಮಿಸಿಲ್ಲ!
ಬುಧವಾರ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಗೋಕರ್ಣಕ್ಕೆ ಭೇಟಿ ನೀಡಿದರು. ಇಲ್ಲಿನ ಆತ್ಮಲಿಂಗ, ಕಡಲತೀರದ ಜೊತೆ ಸಾಂಪ್ರದಾಯಿಕ ಹಳ್ಳಿಯ ವಾತಾವರಣ ನೋಡಿ ಅವರು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ವಿಚಾರ ಮಾಡಿದರು. ಹೀಗಾಗಿ ಕಾರವಾರಕ್ಕೆ ಹೋದ ಅವರು ಅಲ್ಲಿ ತಮ್ಮ ಭಾಷಣದಲ್ಲಿಯೂ ಗೋಕರ್ಣವನ್ನು ಕೊಂಡಾಡಿದರು. ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಕಲ್ಪಿಸಿಕೊಂಡು ಈ ಬಗ್ಗೆ ವರದಿ ಸಲ್ಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಿದರು. ಆದರೆ, ಉತ್ತರ ಕನ್ನಡ ಜಿಲ್ಲೆಗೆ ರಾಜ್ಯ ಸರ್ಕಾರ ಖಾಯಂ ಆಗಿ ಪ್ರವಾಸೋದ್ಯಮ ಅಧಿಕಾರಿಯನ್ನು ನೇಮಿಸಿಲ್ಲ ಎಂಬ ಸತ್ಯ ಅವರ ಗಮನಕ್ಕೆ ಇರಲಿಲ್ಲ!
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇಳಿ ಮಾಡಿಸಿದ ಸ್ಥಳ. ಧಾರ್ಮಿಕ ಪ್ರವಾಸೋದ್ಯಮದ ಜೊತೆ ಇಲ್ಲಿನ ಸಮುದ್ರ, ಗುಹೆ, ಚಾರಣ ಪಥ ಮೊದಲಾದ ನೈಸರ್ಗಿಕ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಿದರೂ ಈಗಿರುವುದಕ್ಕಿಂತ ನೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಸಾಧ್ಯ. ಹಾಲಕ್ಕಿಗಳ ಜೀವನ, ಅವರು ನಡೆಸುವ ಹೂವು-ಕಾಡು ಹಣ್ಣಿನ ವ್ಯಾಪಾರ. ಸಾಂಪ್ರದಾಯಿಕ ಹಾಡು, ಅಲ್ಲಿನ ಸುಗ್ಗಿ ಕುಣಿತಗಳನ್ನು ಹೊರಪ್ರಪಂಚಕ್ಕೆ ಪರಿಚಯಿಸಿ ಪ್ರವಾಸೋದ್ಯಮ ಬೆಳವಣಿಗೆ ನಡೆಸುವ ಬಗ್ಗೆ ಉತ್ತರ ಕನ್ನಡ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿ ಬೆಳಕು ಚೆಲ್ಲಿದೆ. ಆದರೆ, ಆ ವರದಿ ಕೇಂದ್ರ ಪ್ರವಾಸೋದ್ಯಮ ಸಚಿವರಿಗೂ ಸಲ್ಲಿಕೆಯಾಗಬೇಕಿದೆ.
ಮುಖ್ಯವಾಗಿ ಗೋಕರ್ಣ ರಸ್ತೆಗಳ ಅಭಿವೃದ್ಧಿ ಜೊತೆ ಸುಸಜ್ಜಿತ ಪ್ರವಾಸೋದ್ಯಮ ಚಟುವಟಿಕೆ ನಡೆಸುವ ವಿಧಾನಗಳ ಬಗ್ಗೆ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೀರಣ್ಣ ನಾಯಕ ಮೊಗಟಾ ಅವರು ವರದಿ ಸಿದ್ಧಪಡಿಸುತ್ತಿದ್ದಾರೆ. ಆದರೆ, ಈ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುವುದು ಅನುಮಾನ. ರಾಜ್ಯ ಸರ್ಕಾರದ ಪ್ರವಾಸೋದ್ಯಮ ಸಚಿವರ ಸೂಚನೆ ಮೇರೆಗೆ ಬೀರಣ್ಣ ನಾಯಕ ಮೊಗಟಾ ಅವರು ಈ ವರದಿ ಸಿದ್ಧಪಡಿಸುತ್ತಿದ್ದು, ವರದಿಯಲ್ಲಿರುವ ಅಂಶಗಳನ್ನು ನುಷ್ಠಾನ ಮಾಡುವುದು ರಾಜ್ಯ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸದ್ಯ ಕೇಂದ್ರ ಪ್ರವಾಸೋದ್ಯಮ ಸಚಿವರೇ ಗೋಕರ್ಣದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದು, ಉತ್ತರ ಕನ್ನಡ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ವರದಿ ಕೇಂದ್ರಕ್ಕೆ ಸಲ್ಲಿಕೆಯಾದರೆ ಅಗತ್ಯ ಅನುದಾನ ಸಿಗುವ ಸಾಧ್ಯತೆ ಹೆಚ್ಚಿದೆ.
`ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ಪ್ರಸಾದ 2.0 ಯೋಜನೆ ಅಡಿ ಬನವಾಸಿ ಹಾಗೂ ಗೋಕರ್ಣ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸುವ ಕೆಲಸ ನಡೆದಿದೆ. ಇದರೊಂದಿಗೆ ಗೋಕರ್ಣದಲ್ಲಿ ಶೌಚಾಲಯ ಸೇರಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ಕೆಲಸ ಮಾಡುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಮಂಜುನಾಥ ನಾವಿ ಪ್ರತಿಕ್ರಿಯಿಸಿದರು. `ಉತ್ತರ ಕನ್ನಡ ಪ್ರವಾಸೋದ್ಯಮ ಅಧ್ಯಯನ ಸಮಿತಿ ಸಿದ್ಧಪಡಿಸಿದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಈ ವರದಿಯನ್ನು ಇಂಗ್ಲಿಷ್‌ನಲ್ಲಿ ಸಹ ಬರೆಯಲಾಗಿದ್ದು, ರಾಜ್ಯ ಸರ್ಕಾರ ಅನುಮತಿ ನೀಡಿದರೆ ಕೇಂದ್ರ ಪ್ರವಾಸೋದ್ಯಮ ಸಚಿವರಿಗೂ ಸಲ್ಲಿಸಲು ಆಸಕ್ತರಾಗಿದ್ದೇವೆ’ ಎಂದು ಅಧ್ಯಯನ ಸಮಿತಿ ಅಧ್ಯಕ್ಷ ಬೀರಣ್ಣ ನಾಯಕ ಮೊಗಟಾ ಅನಿಸಿಕೆ ಹಂಚಿಕೊoಡರು.