ಮುಖದ ಮೇಲೆ ಆದ ಸಣ್ಣ ಗುಳ್ಳೆಗೆ ಚಿಕಿತ್ಸೆಪಡೆಯಲು ಆಸ್ಪತ್ರೆಗೆ ದಾಖಲಾದ ನವವಿವಾಹಿತೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಅದೇ ನೋವಿನಲ್ಲಿ ಅವರು ಬಾವಿಗೆ ಹಾರಿ ಜೀವಬಿಟ್ಟಿದ್ದಾರೆ.
ಶಿರಸಿ ಬನವಾಸಿಯ ನವನಗೇರಿ ಮುಂಡಗೆಹಳ್ಳಿಯ ಸಂಗೀತಾ ಗೌಡ (28) ಅವರು ಒಂದು ವರ್ಷದ ಹಿಂದೆ ಸಿದ್ದಾಪುರದ ಮುರ್ಗಿನಮನೆಯ ದೇವೇಂದ್ರ ಗೌಡ ಅವರನ್ನು ಮದುವೆ ಆಗಿದ್ದರು. 8 ತಿಂಗಳ ಹಿಂದೆ ಅವರಿಗೆ ಸಕ್ಕರೆ ಕಾಯಿಲೆ ಕಾಣಿಸಿಕೊಂಡಿತು. ಕೆಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕಿಡ್ನಿ ಸಮಸ್ಯೆಯಿರುವ ಬಗ್ಗೆ ಮಾಹಿತಿ ದೊರೆಯಿತು.
ಈ ನಡುವೆ ಹಣೆ ಮೇಲೆ ಗುಳ್ಳೆಯಾಗಿದ್ದರಿಂದ ಶಿರಸಿ ಮಾರಿಕಾಂಬಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರು. ಆ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಲಾಯಿತು. ಅಲ್ಲಿ ಡಯಾಲಿಸಿಸ್ ಮಾಡಿಸಿದಾಗ ಕಣ್ಣಿನ ದೋಷ ಕಾಣಿಸಿತು. ಸಕ್ಕರೆ ಕಾಯಿಲೆ, ಕಿಡ್ನಿ ದೋಷ, ಮುಖದ ಮೇಲಿನ ಗುಳ್ಳೆ ಜೊತೆ ಕಣ್ಣಿನ ಸಮಸ್ಯೆಯೂ ಕಾಣಿಸಿಕೊಂಡಿದ್ದರಿoದ ಸಂಗೀತಾ ಗೌಡ ಅವರು ಮಾನಸಿಕವಾಗಿ ಕುಗ್ಗಿ ಹೋದರು.
ಮೇ 20ರ ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದರು. ರಾತ್ರಿ 11 ಗಂಟೆ ವೇಳೆಗೆ ಸಂಗೀತಾ ಗೌಡ ಅವರು ಕಾಣಲಿಲ್ಲ. ಹೀಗಾಗಿ ಅವರ ತಾಯಿ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಬಾವಿ ಬಳಿ ಬಂದು ನೋಡಿದಾಗ ಅದರಲ್ಲಿ ಸಂಗೀತಾ ಗೌಡ ಅವರು ಶವವಾಗಿದ್ದರು. ಸಂಗೀತಾ ಅವರ ಅಣ್ಣ ಭಾಸ್ಕರ ಗೌಡ ಅವರು ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.