15 ವರ್ಷದ ಬಾಲಕಿ ಮೇಲೆ ಬೆಳಗಾವಿಯಲ್ಲಿ ಸಾಮೂಹಿಕ ಅ*ತ್ಯಾ*ಚಾ*ರ ನಡೆದಿದ್ದು, ಕಾರವಾರ ಪೊಲೀಸ್ ಅಧಿಕಾರಿಯ ಪುತ್ರ ಈ ಪ್ರಕರಣದ ಪ್ರಮುಖ ಆರೋಪಿ. ಆ ಆರೋಪಿ ಸಹ ಅಪ್ರಾಪ್ತ!
ಬಾಲಕಿ ವಾಸವಾಗಿದ್ದ ಮನೆ ಸುತ್ತಲು ಈ ಕಾಮುಕರು ವಾಸವಾಗಿದ್ದರು. ಅವರ ಜೊತೆ ಬಾಲಕಿಯ ಸ್ನೇಹ ಬೆಳೆದಿತ್ತು. ಮೇ 6ರಂದು ಪೊಲೀಸಪ್ಪನ ಪುತ್ರ ಆ ಬಾಲಕಿಯನ್ನು ಪಾರ್ಟಿ ಕೊಡಿಸುವುದಾಗಿ ಬೆಳಗಾವಿಯಿಂದ ದೂರ ಕರೆದೊಯ್ದಿದ್ದ. ಎಲ್ಲರೂ ಸೇರಿ ರೆಸಾರ್ಟಿನಲ್ಲಿ ಪಾರ್ಟಿ ಮಾಡಿದ್ದರು. ಅದಾದ ನಂತರ ಬಾಲಕಿ ಶೌಚಾಲಯ ಬಳಸುವುದಕ್ಕಾಗಿ ರೂಮಿಗೆ ಹೋದಾಗ ಅಲ್ಲಿದ್ದ ಮೂವರು ಆಕೆಯ ಮೇಲೆ ಮುಗಿ ಬಿದ್ದರು.
ರೆಸಾರ್ಟಿನ ರೂಮಿನ ಒಳಗೆ ಬಾಲಕಿ ಸಾಕಷ್ಟು ಕೂಗಿದರೂ ಯಾರೂ ನೆರವಿಗೆ ಬರಲಿಲ್ಲ. ಕೈ ಮುಗಿದು ಕೇಳಿಕೊಂಡರೂ ಆ ರಾಕ್ಷಸರು ಬಾಲಕಿಯನ್ನು ಬಿಡಲಿಲ್ಲ. ಸಾಕೀಬ್ ಎಂಬ ಹೆಸರಿನಲ್ಲಿ ರೆಸಾರ್ಟಿನಲ್ಲಿ ರೂಮ್ ಕಾಯ್ದಿರಿಸಿದ್ದು, ಅದೇ ರೂಮಿನಲ್ಲಿ ಸಾಕೀಬ್ ಜೊತೆ ಇನ್ನಿಬ್ಬರು ಸೇರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಬಾಲಕಿ ಹೊಟ್ಟೆನೋವಿನಿಂದ ತತ್ತರಿಸಿದರೂ ಆ ಕಾಮುಕರು ಸುಮ್ಮನಾಗಿಲ್ಲ. ದೌರ್ಜನ್ಯದ ನಂತರ ಆರೋಪಿಯೊಬ್ಬ ಬಾಲಕಿ ಕತ್ತಿನಲ್ಲಿದ್ದ ಸರವನ್ನು ಎಗರಿಸಿ ಪರಾರಿಯಾಗಿದ್ದು, ಸರ ನಾಪತ್ತೆಯಾಗಿರುವುದನ್ನು ಬಾಲಕಿಯ ತಾಯಿ ಪ್ರಶ್ನಿಸಿದಾಗ ಪ್ರಕರಣ ಹೊರ ಬಂದಿದೆ.
ಮೇ 12ರಂದು ಬಾಲಕಿ ಹೊಟ್ಟೆನೋವಿನಿಂದ ಬಳಲಿದ್ದು, ಪಾಲಕರು ಆಸ್ಪತ್ರೆಗೆ ತೋರಿಸಿದ್ದಾರೆ. ಆಗ ವೈದ್ಯರು ಹೇಯಕೃತ್ಯದ ಬಗ್ಗೆ ಖಚಿತಪಡಿಸಿದ್ದು, ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರಿಗೆ ಕಾರವಾರದಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಯ ಪುತ್ರ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಪೊಲೀಸ್ ಅಧಿಕಾರಿ ಸಾಕಷ್ಟು ಒತ್ತಡ ತಂದರೂ ಟಳಕವಾಡಿ ಪೊಲೀಸರು ಇದನ್ನು ಲೆಕ್ಕಿಸದೇ ಪೊಲೀಸಪ್ಪನ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸಪ್ಪನ ಪುತ್ರ ಸೇರಿ ಇಬ್ಬರು ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಬಾಲಕ ತಲೆಮರೆಸಿಕೊಂಡಿದ್ದಾನೆ. ಸಿಕ್ಕಿಬಿದ್ದ ಇಬ್ಬರು ಬಾಲಕರನ್ನು ಬಾಲ ಮಂದಿರಕ್ಕೆ ಸೇರಿಸಲಾಗಿದೆ.