ವಿದ್ಯುತ್ ಉತ್ಪಾದನೆ ವಿಷಯದಲ್ಲಿ ದಾಖಲೆ ಬರೆದಿರುವ ಉತ್ತರ ಕನ್ನಡ ಜಿಲ್ಲೆಯ ಅನೇಕ ಭಾಗಗಳಲ್ಲಿ ವಿದ್ಯುತ್ ಸರಬರಾಜು ಸರಿಯಾಗಿಲ್ಲ. ಸಿದ್ದಾಪುರ ತಾಲೂಕಿನ ಕಾನಸೂರು ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರೆದಿದ್ದು, ಅಲ್ಲಿನ ಜನ ವಿದ್ಯುತ್ ದೀಪ ಉರಿಯದ ಕಾರಣ ಆ ಭಾಗದ ಜನ ರಾತ್ರಿಯಿಡಿ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾನಸೂರು ಮಾತ್ರವಲ್ಲ.. ಸುತ್ತಲಿನ ಹಲವು ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿದಿಲ್ಲ. ಈ ಬಗ್ಗೆ ಹೆಸ್ಕಾಂ ಕಚೇರಿಗೆ ಫೋನ್ ಮಾಡಿದರೆ ಅಲ್ಲಿ ಸಮಾಧಾನದಿಂದ ಉತ್ತರಿಸುವವರೂ ದಿಕ್ಕಿಲ್ಲ!
ಕಳೆದ ಎರಡು ವಾರದಿಂದ ಕಾನಸೂರು ಭಾಗದಲ್ಲಿ ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಒಮ್ಮೆ ನಿರ್ವಹಣೆ ನೆಪ, ಇನ್ನೊಮ್ಮೆ ತಂತಿ ಕಟ್ಟಾದ ಹೇಳಿಕೆ, ಮತ್ತೊಮ್ಮೆ ಪ್ಯೂಸ್ ಹಾಳಾದ ದಾಖಲೆ, ಪದೇ ಪದೇ ಕೇಳಿದಾಗ ಮರ ಬಿದ್ದ ಉದಾಹರಣೆ ಕೊಟ್ಟು ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಈ ಭಾಗಕ್ಕೆ ಒಂದು ತಾಸು ಸಹ ವಿದ್ಯುತ್ ಸರಬರಾಜು ಆಗಿಲ್ಲ. ಹೀಗಾಗಿ ಮೊಬೈಲ್ ಚಾರ್ಜ ಹಾಕುವುದಕ್ಕಾಗಿಯೇ ಅಲ್ಲಿನವರು ಪೇಟೆಗೆ ಬರುತ್ತಿದ್ದಾರೆ!
ವಿದ್ಯುತ್ ಇಲ್ಲದ ಬಗ್ಗೆ ಒಬ್ಬರು ಕಚೇರಿಗೆ ಪ್ರಶ್ನಿಸಿದಾಗ `ಹೆಸ್ಕಾಂ ಲೈನ್ ಸಮಸ್ಯೆಯಿದೆ’ ಎನ್ನುತ್ತಾರೆ. ಇನ್ನೊಬ್ಬರು ಪ್ರಶ್ನಿಸಿದಾಗ `ಜೋಗ ಘಟಕದಲ್ಲಿಯೇ ಸಮಸ್ಯೆಯಾಗಿದೆ’ ಎನ್ನುತ್ತಾರೆ. ಮತ್ತೊಬ್ಬರನ್ನು ಪ್ರಶ್ನಿಸಿದಾಗ ಅದಕ್ಕೆ ಇನ್ನೊಂದು ಕಾರಣ ಕೊಡುತ್ತಾರೆ. ಒಬ್ಬೊಬ್ಬರು ಒಂದೊoದು ರೀತಿಯ ಉತ್ತರ ಕೊಡುವುದರಿಂದ ಜನ ಅವರ ಉತ್ತರ ನಂಬಲು ಸಿದ್ಧರಿಲ್ಲ. `ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಸರಬರಾಜು ಮಾಡಲು ಆಗುವುದಿಲ್ಲ. ಆ ಅಧಿಕಾರಿಗಳಿಗೆ ಸರಿಯಾಗಿ ಸುಳ್ಳು ಹೇಳಲು ಬರುವುದಿಲ್ಲ’ ಎಂಬುದು ಜನರ ಆರೋಪ!
ಕಾನಸೂರು ಜನರ ಸಮಸ್ಯೆ ಆಲಿಸಿದ ಆ ಭಾಗದ ಲೈನ್‌ಮೆನ್ ಶಿರಸಿ-ಮಾರಿಗದ್ದೆ ಮಾರ್ಗದ ಮೂಲಕ ಒಮ್ಮೆ ಸಂಪರ್ಕ ಕಲ್ಪಿಸಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಮತ್ತೆ ವಿದ್ಯುತ್ ಸರಬರಾಜು ವ್ಯವಸ್ಥೆ ಬಂದ್ ಆಯಿತು. ಇದಕ್ಕೆ ಕಾರಣ ಕೇಳಿದವರಿಗೆ ಅಧಿಕಾರಿಗಳು ನೀಡಿದ್ದು ಅದೇ ಬಗೆಯ ಹಾರಿಕೆಯ ಉತ್ತರ. `ಮಿಕ್ಸಿ ಚಾಲು ಮಾಡಿ ಚಟ್ನಿಗೆ ಕಾಯಿ ಬೀಸಿಕೊಳ್ಳುವಷ್ಟು ಸಮಯ ಸಹ ವಿದ್ಯುತ್ ಇರಲಿಲ್ಲ’ ಎಂಬುದು ಅಲ್ಲಿನ ಮಹಿಳೆಯರ ಅಳಲು!
`ಸಿದ್ದಾಪುರದಿಂದ ಹಾರ್ಸಿಕಟ್ಟಾ ಮೂಲಕ ಕೋಡ್ಸರ-ಬಾಳೆಸರ-ಹಸರಗೋಡ ಭಾಗಕ್ಕೆ ಹಾದು ಬಂದಿರುವ ವಿದ್ಯುತ್ ಮಾರ್ಗದ ಸಮಸ್ಯೆಯೂ ಇದಕ್ಕಿಂತ ಹೊರತಾಗಿಲ್ಲ. ಈ ಭಾಗದಲ್ಲಿ ವಿದ್ಯುತ್ ಬಂದಿದ್ದಕ್ಕಿoತ ಹೋಗಿದ್ದೇ ಹೆಚ್ಚು’ ಎನ್ನುವುದು ಸಾರ್ವಜನಿಕರ ಮಾತು. `ಕೂಡಲೇ ಈ ಭಾಗದ ವಿದ್ಯುತ್ ಸಮಸ್ಯೆ ಸರಿಪಡಿಸಬೇಕು. ಇನ್ನೂ ಆರಂಭಗೊಳ್ಳದ ಕಾನಸೂರು ಸಬ್ ಗ್ರಿಡ್ ಕೆಲಸವನ್ನು ತ್ವರಿತವಾಗಿ ಕೈಗೊಂಡು, ಈ ಭಾಗದ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು’ ಎಂಬುದು ಊರಿನವರ ಬೇಡಿಕೆ. `ತಮ್ಮ ಬೇಡಿಕೆ ಈಡೇರದೇ ಇದ್ದರೆ ಪ್ರತಿಭಟನೆ ಅನಿವಾರ್ಯ’ ಎಂಬುದು ಅಲ್ಲಿನವರ ಎಚ್ಚರಿಕೆ.