`ಅಲ್ಲಿ ಜಗಳ ನಡೆಯುತ್ತಿದೆ. ಆಭರಣ ಕಸಿದುಕೊಳ್ಳುತ್ತಿದ್ದಾರೆ’ ಎಂದು ಮಹಿಳೆಯರನ್ನು ನಂಬಿಸಿ ಅವರ ಆಭರಣಗಳನ್ನು ಅಪಹರಿಸುವುದನ್ನು ಕಾಯಕವನ್ನಾಗಿಸಿಕೊಂಡಿದ್ದವನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಯುಸುಫ್ ಖಾನ್ ಎಂಬಾತ ಬಟ್ಟೆ ವ್ಯಾಪಾರಿ. ಜೊತೆಗೆ ಕಳ್ಳತನ ಆತನ ಕುಲ ಕಸುಬು. ಬಾಗಲಕೋಟೆ, ಜಮಖಂಡಿ, ನವನಗರ, ಮಹಲಿಂಗಪುರ, ಹುಬ್ಬಳ್ಳಿ ಸೇರಿ ಹಲವು ಕಡೆ ಈತ ಮಹಿಳೆಯರನ್ನು ಯಾಮಾರಿಸಿ ಅವರ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿದ್ದ. ರಾಜ್ಯದ ನಾನಾ ಕಡೆ 24 ಕಳ್ಳತನ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ.
2010ರಲ್ಲಿ ಶಿರಸಿಯಲ್ಲಿ ಸಹ ಮಹಿಳೆಯರ ಚಿನ್ನ ಕದ್ದು ಸಿಕ್ಕಿಬಿದ್ದಿದ್ದ. ಆ ವೇಳೆ ನ್ಯಾಯಾಲಯದಿಂದ ಜಾಮೀನುಪಡೆದ ನಾಪತ್ತೆಯಾದ ಯುಸುಫ್ ಖಾನ್ ನಂತರ ಯಾರ ಕೈಗೂ ಸಿಕ್ಕಿರಲಿಲ್ಲ. ಸಾಕಷ್ಟು ಕಡೆ ಪೊಲೀಸರು ಹುಡುಕಾಟ ನಡೆಸಿದರೂ ಆ ಕಳ್ಳನ ಸುಳಿವಿರಲಿಲ್ಲ. ತೆಲಂಗಾಣಕ್ಕೆ ತೆರಳಿದ್ದ ಯುಸೀಪ್ ಖಾನ್ ಅಲ್ಲಿಯೂ ತನ್ನ ಅಪರಾಧ ಕೃತ್ಯಗಳನ್ನು ಮುಂದುವರೆಸಿದ್ದ.
ಸದ್ಯ ಆತ ಕಲಬುರಗಿಯ ರೆಹಮತ್ ನಗರದಲ್ಲಿ ಅಡಗಿರುವುದನ್ನು ಪತ್ತೆ ಮಾಡಿದ ಶಿರಸಿ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದರು. ಮೇ 20ರಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ ಹಾಗೂ ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಅವರ ಸೂಚನೆ ಮೇರೆಗೆ ಸಿಪಿಐ ಶಶಿಕಾಂತ ವರ್ಮ ತಂಡದವರು ಕಲಬುರಗಿಯಲ್ಲಿ ಕಾರ್ಯಾಚರಣೆ ನಡೆಸಿದರು. ಬೆರಳಚ್ಚು ವಿಭಾಗದ ಪಿಐ ರಾಘವೇಂದ್ರ ನಾಯ್ಕ, ಪಿಐ ರಾಜಕುಮಾರ ಉಕ್ಕಲಿ, ರತ್ನಾ ಕುರಿ ಅವರ ಜೊತೆ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರಕೆರ್, ಅಶೋಕ ನಾಯ್ಕ, ಸಂದೀಪ ನಿಂಬಾಯಿ, ರಾಮಯ್ಯ ಪೂಜಾರಿ ಯುಸಿಫ್ ಖಾನ್’ನನ್ನು ಬಂಧಿಸಿದರು.
ಕಾರವಾರ ಟೆಕ್ನಿಕಲ್ ಸೆಲ್’ನ ಉದಯ ಗುನಗಾ, ಬೆರಳಚ್ಚು ವಿಭಾಗದ ಲಿಂಗರಾಜ, ಸುಬ್ರಮಣ್ಯ ಪಿಟಿ ಸಹ ಈ ಕಾರ್ಯಾಚರಣೆಯಲ್ಲಿದ್ದರು.