ಉತ್ತರ ಕನ್ನಡ ಜಿಲ್ಲಾಡಳಿತ ಸ್ಥಾಪಿಸಿದ ಸಹಾಯವಾಣಿಗೆ ಜಿಲ್ಲೆಯ ನಾನಾ ಭಾಗಗಳಿಂದ ದೂರು ಬರುತ್ತಿದೆ. ಸರಿಸುಮಾರು 10ರಿಂದ 20 ನಿಮಿಷದೊಳಗೆ ಆ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ.
ಗುರುವಾರ ಬೆಳಗ್ಗೆ 11.10ಕ್ಕೆ ಭಟ್ಕಳದ ಯಲ್ವಡಿಕರ್ ಬಳಿ ಮನೆ ಕುಸಿತದ ಮಾಹಿತಿ ಬಂದಿದ್ದು, 11.30ರೊಳಗೆ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆಗೆ ಸಿಲುಕಿದ್ದ ಸಂತ್ರಸ್ತರನ್ನು ಸಮಾಧಾನ ಮಾಡಿದರು. ಕಾರವಾರ ನೌಕಾನೆಲೆಯ ಅರ್ಗಾ ಬಳಿ ರಸ್ತೆಗೆ ಮರ ಬಿದ್ದ ಬಗ್ಗೆ ಸಂಜೆ 5.20ಕ್ಕೆ ದೂರು ಸ್ವೀಕಾರವಾಗಿದ್ದು. 5.30ರ ವೇಳೆ ಐಆರ್‌ಬಿ ಹಾಗೂ ಅರಣ್ಯ ಇಲಾಖೆಯವರು ಆ ಮರ ತೆರವು ಮಾಡಿದರು.
ಶಿರಸಿಯ ಹುಲೇಕರ್ ಮತ್ತು ಕೆಹೆಚ್‌ಬಿ ಕಾಲೋನಿಯಲ್ಲಿ ಮಳೆಯಿಂದ ಮನೆ ಹಾನಿ ನಡೆದ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ತಕ್ಷಣ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಅಲ್ಲಿಗೆ ದೌಡಾಯಿಸಿದರು. ಕಾರವಾರದ ಹೈ ಚರ್ಚ ರಸ್ತೆಯ ಬಳಿ ಚರಂಡಿಯಲ್ಲಿ ನೀರು ಹರಿಯಲು ತೊಂದರೆಯಾದ ಕುರಿತು 12.28ಕ್ಕೆ ದೂರು ಬಂದಿತು. ಮಧ್ಯಾಹ್ನ 4.58ರೊಳಗೆ ನಗರಸಭೆಯವರು ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಿದರು. ಗೋಕರ್ಣದಲ್ಲಿ ಚರಂಡಿ ಬಳಿ ಇದ್ದ ತ್ಯಾಜ್ಯದ ರಾಶಿಯ ಕುರಿತು 10.58ಕ್ಕೆ ದೂರು ಸಲ್ಲಿಕೆಯಾಯಿತು. 12.50ರ ಸುಮಾರಿಗೆ ಆ ಪ್ರದೇಶ ಸ್ವಚ್ಛವಾಗಿತ್ತು.
ಮಳೆಗಾಲದ ದೂರುಗಳನ್ನು ಸ್ವೀಕರಿಸುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ 24*7 ಸಹಾಯವಾಣಿ ತೆರೆದಿದೆ. ಈ ಸಹಾಯವಾಣಿಗೆ ಬರಪೂರ ಫೋನ್ ಬರುತ್ತಿದ್ದು, ಆದ್ಯತೆಯ ಮೇರೆಗೆ ಸಮಸ್ಯೆ ಬಗೆಹರಿಸಲಾಗುತ್ತಿದೆ. ಗುರುವಾರ ಸಹಾಯವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. `ತುರ್ತು ನಿರ್ವಹಣಾ ಕೇಂದ್ರಕ್ಕೆ ಬರುವ ಎಲ್ಲಾ ರೀತಿಯ ಕರೆಗಳ ಮತ್ತು ವಾಟ್ಸಾಪ್ ಮೂಲಕ ದಾಖಲಾಗುವ ಸಮಸ್ಯೆಗಳನ್ನು ದಾಖಲಿಸಬೇಕು’ ಎಂದು ಅವರು ಸೂಚಿಸಿದರು.
ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರಕ್ಕೆ ಸಲ್ಲಿಕೆಯಾಗುವ ಎಲ್ಲಾ ದೂರುಗಳ ಕುರಿತಂತೆ ದೂರುದಾರರ ಸಂಪರ್ಕ ಸಂಖ್ಯೆ, ಸಮಯ ಸೇರಿದಂತೆ ಸಂಪೂರ್ಣ ಮಾಹಿತಿಯಂತೆ ದಾಖಲಿಸಲಾಗುತ್ತಿದೆ. ಈ ಕೇಂದ್ರದಲ್ಲಿ ತುರ್ತು ಕಾರ್ಯಚರಣೆ ಕೈಗೊಳ್ಳುವ ಇಲಾಖೆಗಳಾದ ಪೊಲೀಸ್, ಅರಣ್ಯ, ಕಂದಾoಯ, ಬಿಎಸ್‌ಎನ್‌ಎಲ್, ಹೆಸ್ಕಾಂ ಇಲಾಖೆಗಳ ಸಿಬ್ಬಂದಿ 24*7 ಪಾಳಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಮಸ್ಯೆ ಬಗೆಹರಿದ ನಂತರ ಅಲ್ಲಿನ ಫೋಟೋ ಜೊತೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ದಾಖಲೆ ಸಲ್ಲಿಸುವುದು ಕಡ್ಡಾಯ.
ಮಳೆಗಾಲದಲ್ಲಿ ನೀವು ಸಮಸ್ಯೆ ಅನುಭವಿಸುತ್ತಿದ್ದೀರಾ? ಹಾಗಾದರೆ, ಇಲ್ಲಿ ಸಂಪರ್ಕಿಸಿ: 08382-229857 ಅಥವಾ 9483511015