ಮಳೆಗಾಲದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿ ಅಂಚಿನಲ್ಲಿ ಸಣ್ಣ-ಪುಟ್ಟ ಜಲಪಾತ ಸೃಷ್ಠಿಯಾಗುತ್ತಿದೆ. ಆದರೆ, ಅಲ್ಲಿ ನಿಂತು ಫೋಟೋ ತೆಗೆಯುವುದು ಅತ್ಯಂತ ಅಪಾಯಕಾರಿ.
ಕಳೆದ ವರ್ಷ ಶಿರೂರಿನ ಬಳಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, 12 ಜನ ಸಾವನಪ್ಪಿದ್ದಾರೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 439 ಕಡೆ ಗುಡ್ಡ ಕುಸಿಯುವ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾಡಳಿತ ಅಪಾಯಕಾರಿ ವಲಯಗಳಲ್ಲಿ ಹಲವು ಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಕಳೆದ ವರ್ಷ ಗುಡ್ಡ ಕುಸಿತವಾದ ಅಂಕೋಲಾ ತಾಲೂಕಿನ ಬಳಲೆ ಹೋಬಳಿಯ ಶಿರೂರು ಗ್ರಾಮ ಪ್ರದೇಶವನ್ನು ಜಿಲ್ಲಾಡಳಿತ ಭೂ ಕುಸಿತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದೆ. ಸದ್ಯ ಮಳೆ ಶುರುವಾಗಿದ್ದು, ಅಂಕೋಲಾದ ಹಲವು ಕಡೆ ಗುಡ್ಡ ಕುಸಿತ ಕಾಣಿಸಿದೆ. ತಹಶೀಲ್ದಾರರು ಸಹ ಸ್ಥಳ ಪರಿಶೀಲನೆ ನಡೆಸಿ ಆ ಭಾಗದಲ್ಲಿ ಮಣ್ಣು ಸಡಲಗೊಂಡು ನೆಲಕ್ಕೆ ಉರುಳುವುದನ್ನು ಖಚಿತಪಡಿಸಿದ್ದಾರೆ. ಈ ಬಾರಿಯೂ ಭೂ ಕುಸಿತದ ಸಾಧ್ಯತೆಯಿರುವ ಹಿನ್ನಲೆ ಶಿರೂರು ಸುತ್ತಲಿನ ಪ್ರದೇಶದಲ್ಲಿ ಫೋಟೋ ತೆಗೆಯುವುದನ್ನು ಸರ್ಕಾರ ನಿಷೇಧಿಸಿದೆ.
ನದಿಯ ನೀರಿನಲ್ಲಿ ಸ್ನಾನ ಮಾಡುವುದು, ಅಲ್ಲಿ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯುವುದು ಸಹ ನಿಷೇಧದ ವ್ಯಾಪ್ತಿಗೆ ಬರುತ್ತದೆ.