ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಮೊಬೈಲ್ ಮೂಲಕವೇ ಸಭೆ ನಡೆಸಿದ ಅವರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
`ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಮಾನವ ಜೀವ ಹಾನಿ ಆಗದಂತೆ ಅಗತ್ಯವಿರುವ ಎಲ್ಲಾ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದವರು ಸೂಚನೆ ನೀಡಿದರು. `ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ಬಳಿ ಇರುವ ಅಪಾಯಕಾರಿ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ಈ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದರೆ ಪರ್ಯಾಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಅರಣ್ಯ ಇಲಾಖೆಯಿಂದ ಅಪಾಯಕಾರಿ ಮರಗಳನ್ನು ತಕ್ಷಣವೇ ತೆರವುಗೊಳಿಸುವ ಕಾರ್ಯ ಮಾಡಬೇಕು’ ಎಂದವರು ಹೇಳಿದ್ದಾರೆ.
`ಸಂತ್ರಸ್ತರಿಗೆ ಪರಿಹಾರ ನೀಡುವಾಗ ಮಾನವೀಯ ನೆಲೆಯಲ್ಲಿ ಅಂದಾಜು ಮೊತ್ತ ಪರಿಗಣಿಸಬೇಕು. ಸಂತ್ರಸ್ತರಿಗೆ ಗರಿಷ್ಟ ಮೊತ್ತದ ಪರಿಹಾರ ನೀಡಬೇಕು. ಪ್ರತಿ ತಹಶೀಲ್ದಾರರ ಖಾತೆಯಲ್ಲಿ 60-70 ಲಕ್ಷ ರೂ ಹಣವಿದ್ದು, ಇನ್ನೂ ಹೆಚ್ಚಿನ ಅನುದಾನ ಅಗತ್ಯವಿದ್ದರೆ ಕೂಡಲೇ ತಿಳಿಸಬೇಕು’ ಎಂದು ಸೂಚಿಸಿದರು. `ನೌಕಾನೆಲೆ ಪ್ರದೇಶದಲ್ಲಿನ ಜನಸವತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಬೇಕು. ರಸ್ತೆಗಳ ಪಕ್ಕದಲ್ಲಿನ ಚರಂಡಿಗಳಲ್ಲಿ ಡ್ರಜ್ಜಿಂಗ್ ಮಾಡುವ ಮೂಲಕ ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಎಚ್ಚರವಹಿಸಬೇಕು. ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿಯೂ ಕೂಡಾ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗದAತೆ ಎಚ್ಚರವಹಿಸಬೇಕು’ ಎಂದರು. `ಗುಡ್ಡ ಕುಸಿತ ಪ್ರದೇಶದಲ್ಲಿ ಮುನ್ನಚ್ಚರಿಕೆವಹಿಸಬೇಕು. ಹೆದ್ದಾರಿ ಕಾಮಗಾರಿಯ ಕಾರಣದಿಂದ ಅಪಘಾತ ಸಂಭವಿಸಿ ಅನಾಹುತವಾದಲ್ಲಿ , ಕಾಮಗಾರಿ ನಿರ್ವಹಿಸುವ ಸಂಸ್ಥೆಯ ಅಧಿಕಾರಿಗಳ ಹೆಸರನ್ನು ನಮೂದಿಸಿ ಪ್ರಕರಣ ದಾಖಲಿಸಬೇಕು’ ಎಂದು ಸೂಚಿಸಿದರು.
`ಎಲ್ಲಾ ತಾಲೂಕುಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿ ಹಾನಿ ಸಂಭವಿಸುವ ಪ್ರದೇಶಗಳನ್ನು ಸಾಕಷ್ಟು ಮುಂಚಿತವಾಗಿ ಗುರುತಿಸಿಕೊಳ್ಳಬೇಕು. ಅಲ್ಲಿನ ಜನರಿಗೆ ಅಗತ್ಯ ಮುನ್ಸೂಚನೆಗಳನ್ನು ನೀಡುವುದರ ಜೊತೆಗೆ ಸಮೀಪದಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು. ಕಾಳಜಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಕೊರತೆಯಾಗದಂತೆ ಅಗತ್ಯ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಎಲ್ಲಾ ತಾಲೂಕುಗಳಲ್ಲಿ 24*7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಕಾರ್ಯನಿರ್ವಹಿಸಬೇಕು’ ಎಂಬ ನಿದರ್ಶನ ನೀಡಿದರು. `ಜಲಾಶಯಗಳಿಂದ ನೀರು ಹೊರಬಿಡುವ ಸಮಯದಲ್ಲಿ ಸಮುದ್ರದ ಉಬ್ಬರ ಮತ್ತು ಇಳಿತವನ್ನು ತಿಳಿದುಕೊಂಡು ನೀರು ಬಿಡುಗಡೆ ಮಾಡಬೇಕು. ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆ ಹೊಂದಿರಬೇಕು, ಸಹಕಾರದಿಂದ ಒಟ್ಟಾಗಿ ಕಾರ್ಯನಿರ್ವಹಿಸುವುದರ ಮೂಲಕ ಜಿಲ್ಲೆಯಲ್ಲಿ ಮಾನ್ಸೂನ್ ವೇಳೆಯಲ್ಲಿ ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅಗತ್ಯವಿರುವ ನೆರವು ಒದಗಿಸಬೇಕು’ ಎಂದರು.