ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಭಾರತದಲ್ಲಿಯೇ ಏಕೈಕ ಎನ್ನುವ ಮಹಿಳಾ ಸತ್ಯಾಗ್ರಹ ಸ್ಮಾರಕವಿದೆ. ಆದರೆ, ನಿರ್ಲಕ್ಷದ ಕಾರಣದಿಂದ ಈ ಸ್ಮಾರಕ ನೆನೆಗುದಿಗೆ ಬಿದ್ದಿದೆ!
ಸಿದ್ದಾಪುರದಿಂದ ಹೊನ್ನಾವರ, ಜೋಗ ತಲುಪುವ ರಸ್ತೆ ಸೇರುವ ಸ್ಥಳ ಮಾವಿನಗುಂಡಿ. ಇಲ್ಲಿ ತಲುಪುತ್ತಿದ್ದಂತೆ ಬಲಗಡೆ ಈ ಮಹಿಳಾ ಸತ್ಯಾಗ್ರಹ ಸ್ಮಾರಕ ಸಿಗುತ್ತದೆ. ಈ ಸ್ಮಾರಕಕ್ಕೆ ಹೋಗಲು ಇರುವ ಗೇಟಿನ ಮೇಲೆ ಜನ ಬಟ್ಟೆ ಒಣಗಿಸುತ್ತಾರೆ. ಒಳ ಪ್ರವೇಶಿಸುವವರನ್ನು ಗೇಟಿಗೆ ಹಾಕಲಾದ ಬೀಗ ಅಣಕಿಸುತ್ತದೆ.
ಹೊನ್ನಾವರಕ್ಕೆ ಹೋಗುವ ರಸ್ತೆಯಲ್ಲಿ ಇರುವ ಚೆಕ್ ಪೋಸ್ಟ್ ಪಕ್ಕದ ಕಾಲುದಾರಿಯಲ್ಲಿ ಇಲ್ಲಿ ಹೋಗಲು ಸಾಧ್ಯವಿದೆ. `ಸರ್ಕಾರ ಈ ಮಹಿಳಾ ಸ್ಮಾರಕದ ಪುನಶ್ಚೇತನಕ್ಕೆ, ನಿರ್ವಹಣೆಗೆ ಗಮನನೀಡಬೇಕಾದ ಅವಶ್ಯಕತೆ ಇದೆ. ಅಮೃತಕಾಲದಲ್ಲಿ ಕೇಂದ್ರ ಸರ್ಕಾರ ಇಂಥ ದೇಶಾದ್ಯಂತ ಇರುವ ಸ್ವಾತಂತ್ರ‍್ಯ ಸ್ಮಾರಕಗಳ ಪಟ್ಟಿಮಾಡಬೇಕು. ಅವುಗಳ ನಿರ್ವಹಣೆಗೆ ಕೇಂದ್ರ ಸರ್ಕಾರ ವಿಶೇಷ ಯೋಚನೆ, ಯೋಜನೆ ಕೈಗೊಳ್ಳಬೇಕು’ ಎನ್ನುತ್ತಾರೆ ಶಿರಸಿಯ ಡಾ ರವಿಕಿರಣ ಪಟವರ್ಧನ್.
ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಸುವರ್ಣ ಸಂಪುಟದಲ್ಲಿ ಉತ್ತರಕನ್ನಡ ಜಿಲ್ಲೆಯ ಕರ ನಿರಾಕರಣೆಯ ಸತ್ಯಾಗ್ರಹ ರೋಮಾಂಚನಕಾರಿ ಪುಟ. ಅದರಲ್ಲಿಯೂ ಮಾವಿನಗುಂಡಿಯಲ್ಲಿ ನಡೆದ ಮಹಿಳೆಯರ ಉಪವಾಸ ಸತ್ಯಾಗ್ರಹ ದೇಶಭಕ್ತಿ, ಛಲ, ಸಂಕಲ್ಪ, ಸಹನೆ, ತ್ಯಾಗ ಹಾಗೂ ಧೈರ್ಯಗಳ ನಿದರ್ಶನವಾಗಿದೆ. 1932 ಮೇ 18ರಂದು ಕರ ನೀಡದ ರೈತರ ಎಮ್ಮೆಗಳನ್ನು ರಸ್ತೆ ಕೆಲಸದ ಕಾರಕೂನ ಹಾಗೂ ಒಬ್ಬ ಹವಾಲ್ದಾರ ಪಡೆದುಕೊಂಡಾಗ ಅವುಗಳನ್ನು ಮರಳಿ ಪಡೆಯಲು ಬಾಣಂತಿಯರು, ವಯಸ್ಕರುಸಹಿತವಾಗಿ ಉಪವಾಸ ಹಾಗೂ ಸತ್ಯಾಗ್ರಹವನ್ನು ನಡೆಸಿದ್ದು ಇದೀಗ ಇತಿಹಾಸ.
`ತ್ಯಾಗಲಿ ಭುವನೇಶ್ವರಮ್ಮ (32 ದಿನಗಳ ಉಪವಾಸ) ಕಲ್ಲಾಳ ಲಕ್ಷ್ಮಮ್ಮ (22 ದಿನಗಳ ಉಪವಾಸ) ಅವರೊಂದಿಗೆ ದೊಡ್ಡನೆ ಮಹಾದೇವಮ್ಮ, ಕುಳಿಬೀಡು ಗಣಪಮ್ಮ, ಹಣಜಿಬೈಲ್ ದುಗ್ಗಮ್ಮ, ಕುಳಿಬೀಡು ಭಾಗೀರತಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡ ಮಾದೇವಮ್ಮ, ಹೆಗ್ಗಾರ ದೇವಮ್ಮ ಇಲ್ಲಿ ಧರಣಿ ನಡೆಸಿದ್ದರು. ಮದ್ರಾಸಿನ ಹಿಂದೂ ಪತ್ರಿಕೆ ಈ ಘಟನೆಯನ್ನು ವರದಿ ಮಾಡಿದ್ದರಿಂದ ಆ ವೇಳೆ ಇದು ರಾಷ್ಟ್ರಮಟ್ಟದ ಸುದ್ದಿಯಾಗಿ ಪ್ರಸಿದ್ದಿ ಪಡೆಯಿತು’ ಎಂದು ಡಾ ರವಿಕಿರಣ ಪಟವರ್ಧನ್ ಅವರು ವಿವರಿಸಿದ್ದಾರೆ.
`ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಬರುವ ಪ್ರತಿ ಪ್ರವಾಸಿಗರು ಈ ಮಹಿಳಾ ಸತ್ಯಾಗ್ರಹ ಸ್ಮಾರಕಕ್ಕೆ ಭೇಟಿ ನೀಡುವಂತಹ ಬೇಕು. ಅಷ್ಟು ಆಕರ್ಷಕವಾಗಿ ಈ ಸ್ಮಾರಕವನ್ನು ಪುನರ್ ನಿರ್ಮಾಣಗೊಳಿಸಬೇಕು. ಪಠ್ಯ ಪುಸ್ತಕದಲ್ಲಿ ಮಹಿಳಾ ಸತ್ಯಾಗ್ರಹಿಗಳ ಮಾಹಿತಿ ಕೊಡಬೇಕು. ಆ ಮೂಲಕ ನಮ್ಮ ಉತ್ತರ ಕನ್ನಡದ ಈ ಮಹಿಳಾ ಸತ್ಯಾಗ್ರಹಿಗಳಿಗೆ ಜೋಗ ಜಲಪಾತಕ್ಕೆ ಬರುವಂತಹ ಪ್ರತಿ ಪ್ರವಾಸಿಗರು ಗೌರವ ಸಲ್ಲಿಸುವಂತಹಾಗಬೇಕು’ ಎಂಬುದು ಡಾ ರವಿಕಿರಣ ಅವರ ಬೇಡಿಕೆ. ಈ ಬಗ್ಗೆ ಅವರು ಈಗಾಗಲೇ ಸರ್ಕಾರಕ್ಕೂ ಪತ್ರ ಬರೆದಿದ್ದಾರೆ.