ಶಿರಸಿ-ಕುಮಟಾ ರಸ್ತೆಯ ನೀಲೇಕಣಿ ಬಳಿಯ ಹೊಂಡಗಳನ್ನು ಮೂರು ದಿನದ ಒಳಗೆ ಮುಚ್ಚದೇ ಇದ್ದರೆ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದಾರೆ.
`ನಿಲೇಕಣಿ ಶಿರಸಿ ನಗರದ ಮುಖ್ಯದ್ವಾರ. ಇಲ್ಲಿನ ರಸ್ತೆ ಹದಗೆಟ್ಟಿದ್ದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ರಿಪೇರಿ ವಿಷಯದಲ್ಲಿ ಆರ್ ಎನ್ ಎಸ್. ಇನ್ಪ್ರಾ ಕಂಪನಿ ವಿಫಲವಾಗಿದ್ದು, ರಸ್ತೆ ಗುಂಡಿ ಮುಚ್ಚಲು ಮೇ 28ರವರೆಗೆ ಕಂಪನಿಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಹೊಂಡ ಮುಚ್ಚದೇ ಇದ್ದರೆ ಮೇ 29ರಂದು ನಾವೇ ಆ ಹೊಂಡ ಮುಚ್ಚಿ, ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇವೆ’ ಎಂದು ಎಚ್ಚರಿಸಿದರು. `ಶಿರಸಿಯಲ್ಲಿ ಆಡಳಿತ ಯಂತ್ರ ಸರಿಯಾಗಿಲ್ಲ. ಐದಾರು ವರ್ಷದಿಂದ ನಡೆಯುತ್ತಿರುವ ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ಇನ್ನೂ ಪೂರ್ಣಗೊಂಡಿಲ್ಲ’ ಎಂದು ದೂರಿದರು.
ಕಾನೂನುಬಾಹಿರ ಕೃತ್ಯಕ್ಕಾಗಿ ಒಳ ಒಪ್ಪಂದ!
ರಸ್ತೆ ಸಂಚಾರ ನಿಷೇಧ ಮಾಡುವ ವಿಷಯದಲ್ಲಿ ಅಧಿಕಾರಿಗಳು ಹಾಗೂ ಕಂಪನಿ ನಡುವೆ ಒಳ ಒಪ್ಪಂದ ನಡೆದಿರುವ ಅನುಮಾನ ಕಾಡುತ್ತಿದೆ. ಮೂರು ವರ್ಷಕ್ಕೆ ಮುಗಿಯಬೇಕಾದ ಕೆಲಸ ಆರು ವರ್ಷ ಕಳೆದರೂ ಮುಗಿಯುತ್ತಿಲ್ಲ. ವನ್ಯಜೀವಿ ಸಂರಕ್ಷಣಾ ಪ್ರದೇಶವಾಗಿರುವ ದೇವಿಮನೆ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುವ ಅನುಮಾನವಿದೆ. ಆ ಪ್ರದೇಶದಲ್ಲಿ ಮರಗಳ್ಳತನ ಹಾಗೂ ವನ್ಯಜೀವಿ ಸಾಗಾಟದ ಆತಂಕವಿದೆ’ ಎಂದವರು ಅನುಮಾನವ್ಯಕ್ತಪಡಿಸಿದರು.
ಸಂಸದರ ಗುಣಗಾನ!
`ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನಿರಂತರ ಸಂಪರ್ಕ, ಸಭೆಗಳಿಂದ ಹೆದ್ದಾರಿ ಕಾಮಗಾರಿ ಇಲ್ಲಿಯವರೆಗೆ ಬಂದಿದೆ’ ಎಂದವರು ಹೇಳಿದರು. `ಕಾಗೇರಿ ಅವರು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಹಾವೇರಿ ಶಿರಸಿ ರಸ್ತೆಯ ಕಾಮಗಾರಿ ಕುರಿತು ನಿರಂತರ ಪ್ರಯತ್ನ ನಡೆಸಿದ್ದಾರೆ. ಅವರಿಗೆ ರಾಜ್ಯ ಸರಕಾರ ಸಹಕಾರ ಕೊಡಬೇಕು’ ಎಂದು ಒತ್ತಾಯಿಸಿದರು.
ಡೀಸಿ ವಿರುದ್ಧ ಡಿಶುಂ ಡಿಶುಂ!
`ಈ ಮೊದಲು ಫೆ 25ರವರೆಗೆ ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚಾರ ನಿರ್ಬಂಧ ಹಾಕಲಾಗಿತ್ತು. ನಂತರ ಅದನ್ನು ಮತ್ತೆ ಮೂರು ತಿಂಗಳು ಮುಂದೂಡಲಾಯಿತು. ಇದೀಗ ಮತ್ತೆ ಒಂದು ತಿಂಗಳು ಮುಂದೂಡಲಾಗಿದೆ. ಯಾರನ್ನು ಕೇಳಿ ಈ ರೀತಿ ನಿರ್ಬಂಧ ಮುಂದುವರೆಸಿದ್ದೀರಿ?’ ಎಂದು ಅನಂತಮೂರ್ತಿ ಹೆಗಡೆ ಜಿಲ್ಲಾಡಳಿತವನ್ನು ಪ್ರಶ್ನಿಸಿದರು. `ಕಾಮಗಾರಿ ವಿಳಂಬವಾಗಲು ಕಾರಣವೇನು? ಕಾಮಗಾರಿ ವಿಳಂಬ ಮಾಡಿದ ಕಂಪನಿಗೆ ಏನು ದಂಡ ವಿಧಿಸಿದ್ದೀರಿ ? ಇನ್ನು ಎಷ್ಟು ವರ್ಷ ಶಿರಸಿ- ಕುಮಟಾ ರಸ್ತೆ ಸಂಚಾರ ನಿರ್ಬಂಧ ಹೇರಲಿದ್ದೀರಿ? ಎಂದು ಜಿಲ್ಲಾಧಿಕಾರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.