ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಆ ಬಗ್ಗೆ ವರದಿ ಪ್ರಕಟಿಸಿದ್ದ `ಕನ್ನಡವಾಣಿ’ ವಿರುದ್ಧ ದಾಖಲಾದ ಪೊಲೀಸ್ ಪ್ರಕರಣದ ತನಿಖೆಗೆ ಧಾರವಾಡ ಹೈಕೋರ್ಟ ತಡೆಯಾಜ್ಞೆ ನೀಡಿದೆ.
ಶಾಸಕ ದಿನಕರ ಶೆಟ್ಟಿ ಅವರ ಮನೆಯಲ್ಲಿ 80 ಸಾವಿರ ರೂ ಹಣ ಕಳ್ಳತನ ನಡೆದಿತ್ತು. ಮಹಿಳೆಯೊಬ್ಬರು ಈ ಹಣ ಅಪಹರಿಸಿದ ಬಗ್ಗೆ ವದಂತಿ ಹಬ್ಬಿತ್ತು. ಆ ಮಹಿಳೆ ಶಾಸಕ ದಿನಕರ ಶೆಟ್ಟಿ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಬಗ್ಗೆ `ಕನ್ನಡವಾಣಿ’ ಮಹಿಳೆ ಮಾತನಾಡಿದ ಆಡಿಯೋ ದಾಖಲೆಗಳ ಜೊತೆ ವರದಿ ಪ್ರಸಾರ ಮಾಡಿತ್ತು. ಮಧುಸೂದನ ಹೆಗಡೆ ಎಂಬಾತರು ಕನ್ನಡವಾಣಿ ವಿರುದ್ಧಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಪ್ರಕರಣದ ವಿಚಾರಣೆ ಶುರು ಮಾಡಿದ್ದು, ಕನ್ನಡವಾಣಿ ಪರವಾಗಿ ನ್ಯಾಯವಾದಿ ಪ್ರಶಾಂತ್ ನಾಯಕ್ ಹಾಗೂ ಸೌರಭ್ ಹೆಗಡೆ ಹೊಡ್ಲಮನೆ ಹೈಕೋರ್ಟಿನ ಮೊರೆ ಹೋಗಿದ್ದರು. `ಕನ್ನಡವಾಣಿ ಯಾವುದೇ ಅಪರಾಧ ಮಾಡಿಲ್ಲ. ಮಹಿಳೆಯ ಹೇಳಿಕೆಯನ್ನು ಮಾತ್ರ ಪ್ರಕಟಿಸಿದೆ’ ಎಂದು ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಈ ಹಿನ್ನಲೆ ಮುಂದಿನ ಆದೇಶದವರೆಗೂ ಪ್ರಕರಣದ ವಿಚಾರಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.