30 ವರ್ಷಗಳ ಹಿಂದೆ ಕಾರವಾರದ ಕದ್ರಾ ಬಳಿ ಅಣೆಕಟ್ಟು ನಿರ್ಮಿಸಲಾಗಿದ್ದು, ಈವರೆಗೆ ಒಮ್ಮೆಯೂ ಜಲಾಶಯದ ಹೂಳು ತೆಗೆದಿಲ್ಲ. ಹೀಗಾಗಿ ಜಲಾಶಯದ ಖಚಿತ ನೀರಿನ ಪ್ರಮಾಣ ಅಳೆಯುವುದು ಸಮಸ್ಯೆಯಾಗಿಯೇ ಉಳಿದಿದೆ!
ಕಳೆದ ನಾಲ್ಕು ದಿನಗಳಿಂದ ಕದ್ರಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಗೋವಾದ ಸಾಕಳಿ ನದಿಯ ನೀರು ಸಹ ಕದ್ರಾ ಜಲಾಶಯಕ್ಕೆ ಬರಲಿದ್ದು, ಇದರಿಂದ ನೀರಿನ ಮಟ್ಟ ಏಕಾಏಕಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾಡಳಿತ ಎಲ್ಲಾ ಬಗೆಯ ಮುನ್ನಚ್ಚರಿಕೆಕೈಗೊಂಡಿದೆ.
`ಅಣೆಕಟ್ಟಿನ ನೀರು ಜಿಲ್ಲಾಡಳಿತ ಸೂಚಿಸಿದ ಗರಿಷ್ಟ ಮಟ್ಟ ತಲುಪಿದಾಗ ಹಂತ ಹಂತವಾಗಿ ನೀರು ಬಿಡುಗಡೆ ಮಾಡಬೇಕು’ ಎಂದು ಅಲ್ಲಿನ ಅಧಿಕಾರಿಗಳಿಗೆ ಸೂಚಿಸಲಾಗಿದೆ. `ಒಂದೇ ಬಾರಿ ಹೆಚ್ಚಿನ ಪ್ರಮಾಣದ ನೀರು ಬಿಟ್ಟು ಪ್ರವಾಹದ ಪರಿಸ್ಥಿತಿ ಉಂಟುಮಾಡಬಾರದು’ ಎಂದು ಎಚ್ಚರಿಸಲಾಗಿದೆ. ಜಲಾಶಯದಲ್ಲಿ ಶೇಖರವಾಗಿರುವ ನಿಖರವಾದ ನೀರಿನ ಪ್ರಮಾಣ ತಿಳಿಯಲು ತಜ್ಞರ ವರದಿಪಡೆಯಲು ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಕದ್ರಾ ಜಲಾಶಯಕ್ಕೆ ಶನಿವಾರ ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಕೆ ಸೈಲ್ ಬಾಗಿನ ಅರ್ಪಣೆ ಮಾಡಿದ್ದಾರೆ. ಈ ವೇಳೆ `ಜಲಾಶಯ ವ್ಯಾಪ್ತಿಯಲ್ಲಿ ವಾಸಿಸುವವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಅವರು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. `ನೀರು ಹೊರಬಿಡುವ ಮುನ್ನ ಮುನ್ನಚ್ಚರಿಕೆ ನೀಡಬೇಕು. ತುರ್ತು ಸನ್ನಿವೇಶದಲ್ಲಿ ಆ ಭಾಗದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅಗತ್ಯ ಆಂಬುಲೆನ್ಸ, ದೋಣಿಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು’ ಎಂದವರು ಸೂಚನೆ ನೀಡಿದ್ದಾರೆ. `ದಾಂಡೇಲಿಯಲ್ಲಿ ರಿವರ್ ರ‍್ಯಾಪ್ಟಿಂಗ್ ಸ್ಥಗಿತವಾಗಿರುವ ಹಿನ್ನಲೆ ಅಲ್ಲಿರುವ ರಿವರ್ ರ‍್ಯಾಪ್ಟಿಂಗ್ ತಂಡದವರನ್ನು ಇಲ್ಲಿ ಕರೆಯಿಸಬೇಕು. ಯಾರಿಗೂ ಅನಗತ್ಯ ಸಮಸ್ಯೆಗಳು ಉಂಟಾಗದAತೆ ಎಚ್ಚರವಹಿಸಿಬೇಕು’ ಎಂದು ನಿರ್ದೇಶನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ, ಉಪ ವಿಭಾಗಾಧಿಕಾರಿ ಕನಿಷ್ಕ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ರಾಜೇಂದ್ರ ರಾಣೆ, ಮಲ್ಲಾಪುರ ಗ್ರಾ ಪಂ ಅಧ್ಯಕ್ಷ ಉದಯ್ ಬಾಂದೆಕರ್, ಕದ್ರಾ ಗ್ರಾ ಪಂ ಅಧ್ಯಕ್ಷೆ ಹನುಮವ್ವ, ತಹಸೀಲ್ದಾರ್ ನಿಶ್ಚಲ್ ನರೋನ್ಹಾ ಇತರರಿದ್ದರು.