ಹಾವೇರಿಯಿಂದ ಮುಂಡಗೋಡಿಗೆ ಬಂದ ನಾಲ್ವರು ಇಲ್ಲಿನ ಕುಟುಂಬ ಸದಸ್ಯರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಸು ಕಳ್ಳತನ ಆರೋಪದ ಮೇರೆಗೆ ಈ ಹೊಡೆದಾಟ ನಡೆದಿದೆ.
ಮುಂಡಗೋಡದ ಆಲಳ್ಳಿಯಲ್ಲಿ ಹನುಮಂತಪ್ಪ ಮಡಸಾಲಿ ಅವರು ವಾಸವಾಗಿದ್ದಾರೆ. ಅವರ ಜೊತೆ ಪತ್ನಿ ಯಲ್ಲವ್ವ, ಪುತ್ರ ಮಂಜುನಾಥ ಬದುಕು ಕಟ್ಟಿಕೊಂಡಿದ್ದಾರೆ. ಸದ್ಯ ಈ ಕುಟುಂಬದವರ ಮೇಲೆ ಹಸು ಕಳ್ಳತನದ ಆರೋಪ ಬಂದಿದೆ.
ಮೇ 22ರಂದು ಹಾವೇರಿಯ ಹಾನಗಲ್ಲಿನ ದಶರಥಕೊಪ್ಪದಿಂದ ಬಂದ ಚನ್ನಪ್ಪ ವಡ್ಡರ್ ಅವರು `ತಮ್ಮ ಹಸು ಕಾಣೆಯಾಗಿದೆ’ ಎಂದು ಹೇಳಿದ್ದರು. ಆಗ, ಹನುಮಂತಪ್ಪ ಮಡಸಾಲಿ ಅವರು `ತಾವು ಹಸುವನ್ನು ನೋಡಿಲ್ಲ’ ಎಂದಿದ್ದರು. ಅದಾದ ನಂತರ ಚನ್ನಪ್ಪ ವಡ್ಡರ್ ಅವರು ಹನುಮಂತಪ್ಪ ಅವರ ಮನೆ ಸುತ್ತ ಹುಡುಕಾಟ ನಡೆಸಿದ್ದರು. ಹಸು ಇಲ್ಲದ ಕಾರಣ ಮನೆಗೆ ಮರಳಿದ್ದರು.
ಅದೇ ದಿನ ಸಂಜೆ ಮತ್ತೆ ಅಲ್ಲಿಗೆ ಬಂದ ಚನ್ನಪ್ಪ ವಡ್ಡರ್ ಮತ್ತೆ ಮೂವರನ್ನು ಜೊತೆಗೆ ಕರೆತಂದಿದ್ದರು. `ಹನುಮಂತಪ್ಪ ಮಡಸಾಲಿ ಕುಟುಂಬದವರು ತನ್ನ ಹಸು ಕದ್ದಿದ್ದಾರೆ’ ಎಂದು ಆರೋಪಿಸಿದ್ದರು. ಈ ವೇಳೆ ಅಲ್ಲಿ ಗಲಾಟೆ ನಡೆದಿದ್ದು, ಹನುಮಂತಪ್ಪ ಮಡಸಾಲಿ ಅವರ ಕುಟುಂಬದ ಮೇಲೆ ಚನ್ನಪ್ಪ ವಡ್ಡರ್ ಹಾಗೂ ಶಂಕ್ರಪ್ಪ ವಡ್ಡರ್ ದಾಳಿ ಮಾಡಿದರು. ಅವರ ಜೊತೆ ಬಂದಿದ್ದ ಇನ್ನಿಬ್ಬರು ಬಡಿಗೆ ತೆಗೆದುಕೊಂಡು ಕುಟುಂಬದವರನ್ನು ಬಡಿದರು.
ಪರಿಣಾಮ ಹನುಮಂತಪ್ಪ ಮಡಸಾಲಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಮಗ ಮಂಜುನಾಥ ಮಡಸಾಲಿ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.