ಹೊನ್ನಾವರದ ಹಾರ್ಡವೇರ್ ಅಂಗಡಿಯಲ್ಲಿ ವಿವಿಧ ವಸ್ತು ಖರೀದಿಸಿದ ಇಬ್ಬರು `ಅರ್ದ ತಾಸಿನಲ್ಲಿ ಹಣ ಬ್ಯಾಂಕಿಗೆ ಜಮಾ ಆಗುತ್ತದೆ’ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾರೆ. ಐದು ತಿಂಗಳು ಕಳೆದರೂ ಹಣ ಜಮಾ ಆಗದ ಕಾರಣ ಹಾರ್ಡವೇರ್ ಅಂಗಡಿ ಮಾಲಕ ಪ್ರಾನ್ಸಿಸ್ ಡುಮಿಂಗ್ ಡಿಸೋಜಾ ಪೊಲೀಸ್ ದೂರು ನೀಡಿದ್ದಾರೆ.
ಹೊನ್ನಾವರ ಮಂಕಿ ಬಳಿಯ ನಗರಮನೆಯ ಪ್ರಾನ್ಸಿಸ್ ಡುಮಿಂಗ್ ಡಿಸೋಜಾ ಅವರು ಹಾರ್ಡವೇರ್ ಅಂಗಡಿ ನಡೆಸುತ್ತಾರೆ. ಜನವರಿ 7ರ ಸಂಜೆ ಅವರು ಅಂಗಡಿಯಲ್ಲಿರುವಾಗ ಇಬ್ಬರು ಅಪರಿಚಿತರು ಅಲ್ಲಿಗೆ ಆಗಮಿಸಿದರು. ವಿವಿಧ ವಸ್ತುಗಳನ್ನು ನೋಡಿ ಬೆಲೆ ವಿಚಾರಿಸಿದರು. ವಾಲ್ ಮಿಕ್ಸರ್, ಬಾತ್ ಶವರ್, ಪಂಪ್ ಸೆಟ್ ಸೇರಿ ಬಗೆ ಬಗೆಯ ಸಾಮಗ್ರಿಗಳನ್ನು ಖರೀದಿಸಿದರು.
ಅದೂ-ಇದು ಚೌಕಾಸಿ ಮಾಡಿ 17768ರೂ ಬಿಲ್ ಮಾಡಿಸಿದರು. ಆ ಹಣವನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ನಂಬಿಸಿ ಬ್ಯಾಂಕ್ ಖಾತೆ ವಿವರವನ್ನು ಪಡೆದರು. ಪ್ರಾನ್ಸಿಸ್ ಡುಮಿಂಗ್ ಡಿಸೋಜಾ ಅವರು ತಮ್ಮ ಎಸ್‌ಬಿಐ ಬ್ಯಾಂಕ್ ಖಾತೆ ವಿವರ ನೀಡಿ, ಹಣಕ್ಕಾಗಿ ಕಾಯುತ್ತ ಕುಳಿತರು. `ಇನ್ನೂ ಅರ್ದ ತಾಸಿನಲ್ಲಿ ಹಣ ಬರಲಿದೆ’ ಎಂದ ಅವರಿಬ್ಬರೂ ಫೋನ್ ನಂ ನೀಡಿ ಅಲ್ಲಿಂದ ಹೊರಗೆ ಹೋದರು.
ಐದು ತಿಂಗಳು ಕಳೆದರೂ ಹಣ ಬಾರದ ಕಾರಣ ಅವರ ಮೊಬೈಲ್ ನಂ’ಗೆ ಪ್ರಾನ್ಸಿಸ್ ಡುಮಿಂಗ್ ಡಿಸೋಜಾ ಫೋನ್ ಮಾಡಿದರು. ಆಗ, ಆ ಫೋನ್ ಸ್ವಿಚ್ ಆಫ್ ಎಂದು ಹೇಳಿತು. ಮೋಸ ಹೋಗಿರುವುದನ್ನು ಅರಿತು ಅವರು ಮಂಕಿ ಪೊಲೀಸ್ ಠಾಣೆಗೆ ಧಾವಿಸಿದರು. ತಮಗೆ ಆದ ಅನ್ಯಾಯದ ಬಗ್ಗೆ ದೂರು ದಾಖಲಿಸಿ, ಕಳ್ಳರ ಪತ್ತೆಗೆ ಒತ್ತಾಯಿಸಿದರು.