ಮಳೆಗಾಲದಲ್ಲಿ ಸೋರುವ ದುರ್ಗಾಂಬಾ ಬಸ್ಸಿನಲ್ಲಿ 2 ವರ್ಷದ ಮಗುವಿನ ಜೊತೆ ಪ್ರಯಾಣ ಬೆಳಸಿದ ಮಹಿಳೆಯೊಬ್ಬರು ತಮಗೆ ಆದ ಕೆಟ್ಟ ಅನುಭವಗಳ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಧೈರ್ಯದಿಂದ ಬರೆದುಕೊಂಡಿದ್ದಾರೆ. ಆ ಬಸ್ಸಿನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹೊನ್ನಾವರದ ಸಾರಿಗೆ ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಸೂಚನೆ ನೀಡಿದ್ದಾರೆ.
2025ರ ಮೇ 20ರಂದು ಶಿರಸಿ ಮೂಲದ ಶೃದ್ಧಾ ಭಟ್ಟ ಅವರು ಅವರ ಸಹೋದರಿ ಮೇಧಾ ಭಟ್ಟ ಅವರ ಜೊತೆ ದುರ್ಗಾಂಬಾ ಬಸ್ಸು ಏರಿದ್ದರು. ಮೇಧಾ ಭಟ್ಟ ಅವರ 2 ವರ್ಷದ ಮಗು ಸಹ ಆ ಬಸ್ಸಿನಲ್ಲಿದ್ದು, ಮಳೆ ಬಂದ ಕಾರಣ ಬಸ್ಸು ಪೂರ್ತಿಯಾಗಿ ಒದ್ದೆಯಾಗಿತ್ತು. ಬಸ್ಸು ಚಲಿಸುವ ವೇಳೆ ಒಳಗೆ ಸಹ ನೀರು ತುಂಬಿತ್ತು. ಬಸ್ಸಿನ ಮೇಲ್ಚಾವಣಿಯಿಂದ ನೀರು ನುಗ್ಗುತ್ತಿತ್ತು. ಕಿಟಕಿ ಅಂಚಿನ ಪರದೆಯಿಂದಲೂ ನೀರು ಜಿನುಗುತ್ತಿತ್ತು. ಬಸ್ಸಿನ ಒಳಗಿದ್ದವರ ಆಸನಗಳು ನೆನೆದಿದ್ದವು. ಹೀಗಾಗಿ 1700ರೂ ಹಣ ಪಾವತಿಸಿ ಆ ಮೂವರು ದೇರಳಕಟ್ಟೆಯಿಂದ ಶಿರಸಿಗೆ ಬರುವಷ್ಟರಲ್ಲಿ ಬಸ್ಸಿನ ಒಳಗೆ ನರಕ ಅನುಭವಿಸಿದ್ದರು.
ಆ ಬಸ್ಸಿನಲ್ಲಿ ಪ್ರಯಾಣಿಕರ ಬ್ಯಾಗ್ ಇಡಲು ಜಾಗವಿರಲಿಲ್ಲ. ಜಾಗ ಇದ್ದರೂ ಶೃದ್ಧಾಭಟ್ಟ ಅವರಿಗೆ ಅಲ್ಲಿ ಬ್ಯಾಗ್ ಇಡಲು ಸಾರಿಗೆ ಸಿಬ್ಬಂದಿ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಅವರು ತಮ್ಮ ಆಸನದ ಬಳಿಯೇ ಬ್ಯಾಗುಗಳನ್ನು ಇರಿಸಿಕೊಂಡರು. ಜೊತೆಗೆ ಮಳೆಗಾಲದಲ್ಲಿ ಬಸ್ಸು ಸೋರಿ ತೊಂದರೆಯಾದ ಬಗ್ಗೆ ಶಾರದಾ ಭಟ್ಟ ಅವರು ಚಾಲಕ ಅಬುಬಕ್ಕರ್ ಸಾಬ್ ಅವರಲ್ಲಿ ವಿವರಿಸಿದರು. ಇಬ್ಬರು ಹೆಣ್ಣು ಮಕ್ಕಳನ್ನು ನೋಡಿದ ಚಾಲಕ ಅವರ ಬಳಿ ನಿಂದನಾರ್ಹವಾಗಿ ಮಾತನಾಡಿದರು. `ಸಮಸ್ಯೆ ಇದ್ದರೆ ಆಫೀಸಿಗೆ ಸಂಪರ್ಕಿಸಿ’ ಎಂದು ನುಣಚಿಕೊಂಡರು.
ಆ ಬಸ್ಸಿನಲ್ಲಿ ಸುರಕ್ಷತೆಯ ಯಾವ ಮಾರ್ಗಗಳು ಶೃದ್ಧಾ ಭಟ್ಟ ಅವರಿಗೆ ಕಾಣಲಿಲ್ಲ. ಬಸ್ಸಿಗೆ ಬಾಗಿಲು ಸಹ ಇರಲಿಲ್ಲ. ಎಲ್ಲಾ ಕಡೆಯಿಂದ ನೀರು ಒಳನುಗ್ಗಿದ ಪರಿಣಾಮ 2 ವರ್ಷದ ಮಗು ಸಂಪೂರ್ಣವಾಗಿ ನೆನೆದಿತ್ತು. ಈ ಬಗ್ಗೆ ಚಾಲಕನಿಗೆ ಹೇಳಿದಾಗ ಜವಾಬ್ದಾರಿಯಿಂದ ವರ್ತಿಸಲಿಲ್ಲ. ಆ ವೇಳೆ ಅಲ್ಲಿದ್ದ ಇನ್ನೊಬ್ಬ ಚಾಲಕರು ಬಸ್ಸಿನಲ್ಲಿದ್ದವರನ್ನು ಹೊನ್ನಾವರ ಪೊಲೀಸ್ ಠಾಣೆಗೆ ತಲುಪಿಸಿದರು. ಅಲ್ಲಿನ ಪೊಲೀಸರು ಪ್ರಯಾಣಿಕರ ಅಳಲು ಆಲಿಸುವಾಗ ಚಾಲಕ ಅಬ್ಬು ಬಕ್ಕರ್ ಅಲ್ಲಿಂದ ಓಡಿ ಪರಾರಿಯಾದರು. ಬಸ್ಸಿನ ಮಾಲಕರಿಗೆ ಫೋನ್ ಮಾಡಿದಾಗ ಪೊಲೀಸರ ಹೆಸರು ಕೇಳಿದ ತಕ್ಷಣ ಅವರು ಸ್ವಿಚ್ ಆಫ್ ಮಾಡಿದರು.
ಶೃದ್ಧಾ ಹಾಗೂ ಮೇಧಾ ಭಟ್ಟ ಅವರು ಮಗುವಿನ ಜೊತೆ ರಾತ್ರಿ 1ಗಂಟೆಯಿ0ದ ಬೆಳಗ್ಗೆ 5ಗಂಟೆಯವರೆಗೂ ಪೊಲೀಸ್ ಠಾಣೆಯಲ್ಲಿಯೇ ಆಶ್ರಯಪಡೆದರು. ತಮಗಾದ ಅನುಭವ ಹಾಗೂ ಬಸ್ಸಿನ ಅವ್ಯವಸ್ಥೆಯ ಬಗ್ಗೆ ಶೃದ್ಧಾ ಭಟ್ಟ ಅವರು ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡರು. ದೇರಳಕಟ್ಟೆಯ ಆಸ್ಪತ್ರೆಗಳಿಗೆ ಹೋಗುವ ಅನೇಕ ರೋಗಿಗಳು ಈ ಮಾರ್ಗ ಬಳಸುತ್ತಿದ್ದು, ಅವರಿಗೆ ಸಮಸ್ಯೆಯಾದರೆ ಗತಿ ಏನು? ಎಂದು ಅವರು ಪ್ರಶ್ನಿಸಿದ್ದರು. ಸಾಕಷ್ಟು ಜನ ಬಸ್ ಸೇವೆಯ ಬಗ್ಗೆ ಕಮೆಂಟ್ ಮೂಲಕ ದೂರಿದರು.
ಈ ಎಲ್ಲಾ ವಿಷಯ ಗಮನಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಬಸ್ಸಿನ ಬಗ್ಗೆ ತನಿಖೆಗೆ ಸೂಚನೆ ನೀಡಿದರು. ಹೊನ್ನಾವರದ ಸಾರಿಗೆ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಆ ಬಗ್ಗೆ ಶಾರದಾ ಭಟ್ಟ ಅವರ ಪೊಸ್ಟಿನ ಕಮೆಂಟ್ ಬಾಕ್ಸಿನಲ್ಲಿಯೇ ಅದರ ಮಾಹಿತಿ ನೀಡಿದರು.