ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಪುರಾತನ ಕಾಲದಿಂದಲೂ ಇದ್ದ ಮಳೆ ಮಾಪನ ಕೇಂದ್ರಗಳಲ್ಲಿ ಮಾತ್ರ ಮಳೆ ಪ್ರಮಾಣ ಸರಿಯಾಗಿ ದಾಖಲಾಗುತ್ತಿಲ್ಲ!
ಮೊದಲು ಅಂಕಿ-ಸoಖ್ಯೆ ಇಲಾಖೆ ಮೂಲಕ ಈ ಮಳೆ ಮಾಪನದ ನಿರ್ವಹಣೆ ನಡೆಯುತ್ತಿತ್ತು. ಆದರೆ, 2024ರ ಜೂನ್ ಅವಧಿಯಲ್ಲಿ ಸರ್ಕಾರ ಅಂಕಿ-ಸoಖ್ಯೆ ಇಲಾಖೆಗೆವಹಿಸಿದ್ದ ಮಳೆ ಮಾಪನಾ ಕಾರ್ಯವನ್ನು ಹಿಂಪಡೆಯಿತು. ಅದಾದ ನಂತರ ಆ ಹಳೆಯ ಯಂತ್ರಗಳ ನಿರ್ವಹಣೆ ಹೊಣೆಯನ್ನು ಸರ್ಕಾರ ಯಾರಿಗೂವಹಿಸಿಲ್ಲ. ಹೀಗಾಗಿ ಹಳೆಯ ಯಂತ್ರಗಳು ಇದೀಗ ಸರಿಯಾಗಿ ಕೆಲಸ ಮಾಡುತ್ತಿಲ್ಲ.
ಹಳೆಯ ಯಂತ್ರಗಳ ನಿರ್ವಹಣೆ ಹೊಣೆ ಯಾರದ್ದು? ಎಂಬುದು ಇದೀಗ ಯಾರಿಗೂ ಗೊತ್ತಿಲ್ಲ. ಗ್ರಾಮ ಪಂಚಾಯತದವರನ್ನು ಪ್ರಶ್ನಿಸಿದರೆ `ನಮಗೆ ಆ ಜವಾಬ್ದಾರಿವಹಿಸಿಲ್ಲ’ ಎನ್ನುತ್ತಾರೆ. ತಹಶೀಲ್ದಾರ್ ಕಚೇರಿಯವರನ್ನು ಕೇಳಿದರೆ `ನಮಗೂ ಆ ಬಗ್ಗೆ ಮಾಹಿತಿ ಇಲ್ಲ’ ಎನ್ನುತ್ತಾರೆ. ಸಾಂಖಿಕ ಇಲಾಖೆಯವರನ್ನು ಕೇಳಿದರೆ `ಕಳೆದ ವರ್ಷವೇ ಆ ಹೊಣೆಯಿಂದ ನಾವು ಮುಕ್ತರಾಗಿದ್ದೇವೆ’ ಎನ್ನುತ್ತಾರೆ. ಇನ್ನೂ, ಕೃಷಿ-ತೋಟಗಾರಿಕೆ ಇಲಾಖೆಯವರು ಸಹ `ಆ ಮಳೆ ಮಾಪನ ಯಂತ್ರಕ್ಕೂ ನಮಗೂ ಸಂಬAಧ ಇಲ್ಲ’ ಎನ್ನುತ್ತಿದ್ದಾರೆ.
ಹಾಗಾದರೆ, ಸದ್ಯ ಸರ್ಕಾರ ಮಳೆ ಮಾಪನ ವರದಿಯನ್ನು ಹೇಗೆ ಪಡೆಯುತ್ತದೆ? ಎಂಬ ಪ್ರಶ್ನೆಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶದವರು ಉತ್ತರ ನೀಡಿದ್ದಾರೆ. `15 ವರ್ಷಗಳ ಹಿಂದೆಯೇ ಗ್ರಾಮ ಪಂಚಾಯತ ಮಟ್ಟದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಕೋಶದ ಯಂತ್ರಗಳನ್ನು ಅಳವಡಿಸಲಾಗಿದೆ. ಗ್ರಾ ಪಂ ಕಚೇರಿ, ಆಸ್ಪತ್ರೆ, ಶಾಲೆ ಸೇರಿ ವಿವಿಧ ಮುಖ್ಯ ಪ್ರದೇಶಗಳ ಕಚೇರಿ ಮೇಲ್ಬಾಗ ಮಳೆ ಮಾಪನ ಯಂತ್ರಗಳಿದ್ದು, ಅವುಗಳ ಆಧಾರದಲ್ಲಿ ಸರ್ಕಾರ ಮಳೆ ವರದಿ ಪಡೆಯುತ್ತಿದೆ. ಕೆಲ ತಾಂತ್ರಿಕ ತೊಂದರೆಗಳಿoದ ಮಳೆ ವರದಿ ಸ್ವೀಕಾರವಾಗದೇ ಇದ್ದಾಗ ಸಮೀಪದ ಇನ್ನೊಂದು ಯಂತ್ರದ ವರದಿಯ ಆಧಾರದಲ್ಲಿ ಮಳೆ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೋಶದ ಅಧಿಕಾರಿ ರಮೇಶ್ ಅವರು ಮಾಹಿತಿ ನೀಡಿದರು.
`ಈಗಿರುವ ಮಳೆ ಮಾಪನ ಯಂತ್ರಗಳು ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. ಮಳೆ ಮಾಪನ ಯಂತ್ರೋಪಕರಣಗಳನ್ನು ಖರೀದಿಸುವ ವೇಳೆ ವೆಂಡರ್’ಗಳಿಗೆ ಅದರ ನಿರ್ವಹಣೆಯ ಹೊಣೆವಹಿಸಲಾಗಿದೆ. ಅದಾಗಿಯೂ ಆಗಾಗ ವಿಪತ್ತು ನಿರ್ವಹಣಾ ಕೋಶದ ವಿಜ್ಞಾನಿಗಳು ಯಂತ್ರಗಳ ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ಅವರು ವಿವರಿಸಿದರು.
ಸದ್ಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೈ ಅಳತೆ ಮೂಲಕ ಮಳೆ ಅಳೆಯುವ ಮಾಪನಗಳಿದ್ದರೂ ಅಲ್ಲಿನ ಮಾಹಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ವಿಪತ್ತು ನಿರ್ವಹಣಾ ಕೋಶದ ಅತ್ಯಾಧುನಿಕ ಯಂತ್ರದ ಮೂಲಕ ಮಾಹಿತಿ ಸಿಗುತ್ತಿರುವುದರಿಂದ ಹಳೆಯ ಯಂತ್ರಗಳು ಹಾಳಾಗಿದ್ದರೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವಿಪತ್ತು ನಿರ್ವಹಣಾ ಕೋಶ ನೀಡುವ ವರದಿ ಆಧಾರದಲ್ಲಿಯೇ ಬೆಳೆ ವಿಮೆ ಕಂಪನಿಗಳು ನಷ್ಟದ ಪರಿಹಾರ ನೀಡಬೇಕಾಗಿದ್ದರಿಂದ ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸುವವರು ಆತಂಕಪಡಬೇಕಾಗಿಲ್ಲ.
2025ರ ಮೇ 24ರಂದು ಯಾವ ಊರಿನಲ್ಲಿ ಎಷ್ಟು ಮಳೆಯಾಗಿದೆ? ಮುಂದಿನ ದಿನಗಳಲ್ಲಿ ಎಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ? ವಿಪತ್ತು ನಿರ್ವಹಣಾ ಕೋಶದ ಮಳೆ ವರದಿ ಇಲ್ಲಿ ಡೌನ್‌ಲೋಡ್ ಮಾಡಿ ಓದಿ
ಮಳೆ ವರದಿ24-05-2025