ಭವಿಷ್ಯದಲ್ಲಿ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಬಹುದಾದ ರೈಲ್ವೆ ನಕ್ಷೆ ಬಿಡುಗಡೆಯಾಗಿದೆ. ಸಾಮಾಜಿಕ ತಾಣಗಳಲ್ಲಿ ಈ ರೈಲು ಮಾರ್ಗ ಸಂಚಲನ ಮೂಡಿಸಿದೆ.
ಸಾಧ್ಯವಾದಷ್ಟರ ಮಟ್ಟಿಗೆ ಪರಿಸರ ಹಾನಿ ತಪ್ಪಿಸಿ ಹೊಸ ಮಾರ್ಗ ರಚಿಸಲಾಗಿದೆ. ಬೆಟ್ಟ-ಗುಡ್ಡಗಳು ಹೆಚ್ಚಿರುವ ಮಲೆನಾಡು ಪ್ರದೇಶದಲ್ಲಿ ಬಯಲು ಹಾಗೂ ಗದ್ದೆ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಗುಡ್ಡ ಪ್ರದೇಶವಿರುವ ಹದಿನಾರನೇ ಮೈಲುಕಲ್ಲು, ನಾಣಿಕಟ್ಟಾ, ಕಾನಸೂರು, ಅಜ್ಜಿಬಳ-ಕಾನಗೋಡ ಭಾಗಗಳಲ್ಲಿ ರೈಲ್ವೆ ಮಾರ್ಗ ಬರುವ ಸಾಧ್ಯತೆಗಳಿಲ್ಲ. ಸಂರಕ್ಷಿತ ಅರಣ್ಯ ಪ್ರದೇಶದಿಂದಲೂ ರೈಲು ಮಾರ್ಗ ಅಂತರ ಕಾಯ್ದುಕೊಂಡಿದೆ.
ರೈಲ್ವೆ ಇಲಾಖೆಯ ಪ್ರಿಲಿಮಿನರಿ ಎಂಜಿನಿಯರಿoಗ್ & ಟ್ರಾಫಿಕ್ ಸರ್ವೆಯಲ್ಲಿ ಹೊಸ ಬ್ರಾಡ್‌ಗೇಜ್ ರೈಲ್ವೆ ಮಾರ್ಗ ಹಾಗೂ ರೈಲು ನಿಲ್ದಾಣಗಳ ಕುರಿತು ವಿವರ ಪ್ರಕಟಿಸಲಾಗಿದೆ. ಅದರ ಪ್ರಕಾರ ತಾಳಗುಪ್ಪಾದಿಂದ ಕಾವಂಚೂರು ಮಾರ್ಗವಾಗಿ ಸಿದ್ದಾಪುರಕ್ಕೆ ಆಗಮಿಸುವ ಈ ರೈಲು ಮಾರ್ಗ ನಂತರ ಕುಣಜಿ-ತೆಲಗುಂದ್ಲಿ- ಒಡ್ಡಿನಕೊಪ್ಪ ಮಾರ್ಗವಾಗಿ ಶಿರಸಿಗೆ ಬರಲಿದೆ. ನಂತರ ಮಳಲಗಾಂವ್-ಕಾತೂರು ಮಾರ್ಗವಾಗಿ ಮುಂಡಗೋಡಕ್ಕೆ ತೆರಳಲಿದೆ. ತದನಂತರದಲ್ಲಿ ತಡಸ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣ ತಲುಪಲಿದೆ.
ಸಿದ್ದಾಪುರ ತಾಲೂಕಿನ ಕಾವಂಚೂರು, ಸಿದ್ದಾಪುರ ಹಾಗೂ ಕುಣಜಿಯಲ್ಲಿ ರೈಲ್ವೆ ನಿಲ್ದಾಣ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ತೆಲಗುಂದ್ಲಿ, ಶಿರಸಿ ತಾಲೂಕಿನಲ್ಲಿ ಒಡ್ಡಿನಕೊಪ್ಪ, ಒಕ್ಕಲಕೊಪ್ಪ, ಗೌಡಳ್ಳಿ, ಮಳಲಗಾಂವ್ ಹಾಗೂ ಗೋಟಗಾಡಿ ಬಳಿ ನಿಲ್ದಾಣ ಸ್ಥಾಪನೆಗೆ ನಕ್ಷೆ ಸಿದ್ಧವಾಗಿದೆ. ಮುಂಡಗೋಡ ತಾಲೂಕಿನಲ್ಲಿ ಕಾತೂರು, ಮುಂಡಗೋಡ ಹಾಗೂ ಅಷ್ಟಕಟ್ಟಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆ ನಕ್ಷೆಯಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ತಡಸ ಹಾಗೂ ಧಾರವಾಡ ಜಿಲ್ಲೆಯಲ್ಲಿ ಬೆಳಗಲಿ ಬಳಿ ರೈಲ್ವೆ ನಿಲ್ದಾಣ ಬರಲಿದೆ.
ತಾಳಗುಪ್ಪಾ-ಹುಬ್ಬಳ್ಳಿ ಮಾರ್ಗದಲ್ಲಿ ಸಿದ್ದಾಪುರ-ಶಿರಸಿ-ಮುಂಡಗೋಡ ಹಾಗೂ ತಡಸಗಳು ಪ್ರಮುಖ ನಿಲ್ದಾಣಗಳಾಗಲಿದೆ. ಸಿದ್ದಾಪುರ ನಿಲ್ದಾಣವು ಸಿದ್ದಾಪುರ-ಕೊಂಡ್ಲಿ ನಡುವಿನ ಗದ್ದೆ ಬಯಲಿನಲ್ಲಿ ರೈಲ್ವೆ ಮಾರ್ಗದ 17 ಹಾಗೂ 18 ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ಶಿರಸಿ ನಿಲ್ದಾಣವು ಗೌಡಳ್ಳಿಯಿಂದ ಮುಂದೆ ಒಕ್ಕಲಕೊಪ್ಪ ಬಳಿ ರೈಲ್ವೆ ಮಾರ್ಗದ 66ನೇ ಕಿಲೋಮೀಟರ್‌ನಲ್ಲಿ ನಿರ್ಮಾಣವಾಗಲಿದೆ. ಮುಂಡಗೋಡ ರೈಲ್ವೆ ನಿಲ್ದಾಣವು ಮುಂಡಗೋಡ ಪಟ್ಟಣದಿಂದ 4 ಕಿಲೋಮೀಟರ್ ದೂರದಲ್ಲಿ ರೈಲ್ವೆ ಮಾರ್ಗದ 116 ಹಾಗೂ 117ನೇ ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ತಡಸ ನಿಲ್ದಾಣವು ತಡಸ ಪಟ್ಟಣದಿಂದ 2 ಕಿಲೋಮೀಟರ್ ದೂರದಲ್ಲಿ ರೈಲ್ವೆ ಮಾರ್ಗದ 142 ಹಾಗೂ 143ನೇ ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ.

ಎಲ್ಲವೂ ಅಂದುಕೊoಡoತೆ ನಡೆದರೆ, ಶಿರಸಿ-ಹಾವೇರಿ ರೈಲ್ವೆ ಮಾರ್ಗ ನಿರ್ಮಾಣದ ಯೋಜನೆಗೂ ಪೂರಕವಾಗುವಂತೆ ಈ ರೈಲ್ವೆ ಮಾರ್ಗ ಸಿದ್ಧಪಡಿಸಲಾಗಿದೆ. ಅದರ ಪ್ರಕಾರ ಶಿರಸಿ ತಾಲೂಕಿನ ಮಳಲಗಾಂವ್‌ನಲ್ಲಿ ಜಂಕ್ಷನ್ ಆಗುವ ಸಾಧ್ಯತೆ ಹೆಚ್ಚಿದೆ.