ಯಲ್ಲಾಪುರದ ಮಾಗೋಡಿನಲ್ಲಿ 500 ಎಕರೆಗೂ ಅಧಿಕ ಪ್ರದೇಶ ಹಾಳುಬಿದ್ದಿದ್ದು, ಈ ಪ್ರದೇಶದಲ್ಲಿ `ಐಟಿ ಪಾರ್ಕ’ ಸ್ಥಾಪನೆಯ ಕೂಗು ಕೇಳಿ ಬಂದಿದೆ. `ಗ್ರಾಮೀಣ ಭಾಗದ ಯುವಕರು ಉದ್ಯೋಗ ಅರೆಸಿ ಮಹಾನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ತರಬೇಕು’ ಎಂದು ಅಲ್ಲಿನ ಸಮಾನ ಮನಸ್ಕರು ಒತ್ತಾಯಿಸಿದ್ದಾರೆ.
ಸಾಪ್ಟವೇರ್ ವಲಯಕ್ಕೆ ಸಂಬoಧಿಸಿ ತಂತ್ರಜ್ಞಾನ ಕಂಪನಿಗಳಿಗಾಗಿ ನಿರ್ಮಿಸಲಾಗುವ ಉದ್ಯಮ ವಲಯ. ಅನೇಕ ಐಟಿ ಕಂಪನಿಗಳ ಸಮೂಹ ಒಂದೇ ಕಡೆ ಕಾರ್ಯನಿರ್ವಹಿಸಿದಾಗ ಅದು ಐಟಿ ಪಾರ್ಕ ಎನಿಸಿಕೊಳ್ಳುತ್ತದೆ. ಉತ್ತರ ಕನ್ನಡ ಜಿಲ್ಲೆಯ ಮಾಗೋಡು ಐಟಿ ಪಾರ್ಕ ಸ್ಥಾಪನೆಗೆ ಯೋಗ್ಯ ಸ್ಥಳ. ಐಟಿ ಕಂಪನಿಗಳಿಗೆ ಅಗತ್ಯವಿರುವಷ್ಟು ಜಾಗ, ಸರ್ಕಾರಕ್ಕೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸುವ ತಾಕತ್ತು, ಹೂಡಿಕೆದಾರರಿಗೂ ಬೇಕಾಗಿರುವ ಸೌಲತ್ತುಗಳು ಇಲ್ಲಿ ಹೇರಳ ಪ್ರಮಾಣದಲ್ಲಿವೆ.
ಜನ-ಜೀವನ ಅಭಿವೃದ್ಧಿಗೆ ಸಹಕಾರ
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮಾಗೋಡು ಸಮೀಪದಲ್ಲಿದೆ. ನೆರೆ ರಾಜ್ಯ ಗೋವಾ ಸಹ ಇಲ್ಲಿಂದ ಮೂರು ತಾಸಿನ ದಾರಿ. ಈಗಾಗಲೇ ಹುಬ್ಬಳ್ಳಿ-ಗೋವಾವರೆಗೆ ಬಂದಿರುವ ಐಟಿ ಕಂಪನಿಗಳಿಗೆ ಮಾಗೋಡಿನಲ್ಲಿ ಹೂಡಿಕೆ ಮಾಡುವುದು ದೂರದ ವಿಷಯವಲ್ಲ. ನಿಸರ್ಗದತ್ತವಾದ ಪ್ರಕೃತಿ ಐಟಿ ಉದ್ಯಮಿಗಳನ್ನು ಕೈಬೀಸಿ ಕರೆಯುತ್ತಿದ್ದು, ಅವರಿಗೆ ಅಗತ್ಯವಿರುವ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವುದು ಮಾತ್ರ ಸರ್ಕಾರದ ಜವಾಬ್ದಾರಿ. ಇದರೊಂದಿಗೆ ಮಾಗೋಡಿನಲ್ಲಿ ಐಟಿ ಪಾರ್ಕ ಸ್ಥಾಪನೆ ನಡೆದರೆ ಇಲ್ಲಿನ ಪ್ರವಾಸೋದ್ಯಮ, ಜನ-ಜೀವನ ಅಭಿವೃದ್ಧಿಯೂ ಸಾಧ್ಯವಿದೆ. ಪ್ರಸಿದ್ಧ ಮಾಗೋಡು ಜಲಪಾತ, ಜೇನುಕಲ್ಲು ಗುಡ್ಡ, ಕವಡಿಕೆರೆ ಹಾಗೂ ಗಂಟೆ ಗಣಪತಿ ಕ್ಷೇತ್ರವನ್ನು ಹೊಂದಿರುವ ಈ ಊರು ಎಲ್ಲಾ ದಿಕ್ಕಿನಿಂದಲೂ ಇನ್ನಷ್ಟು ಶ್ರೀಮಂತವಾಗಲಿದೆ.
ಸರ್ಕಾರ ಕನಿಷ್ಟ ಸೌಕರ್ಯ ಒದಗಿಸಿ ಹೂಡಿಕೆದಾರರ ಸಮಾವೇಶ ಮಾಡಿದರೆ ಮಾಗೋಡಿನಲ್ಲಿಯೂ 150 ಕಂಪನಿಗಳು ತಲೆಯೆತ್ತುವ ಸಾಧ್ಯತೆಯಿದೆ. ಇದರಿಂದ ಬೇರೆ ಬೇರೆ ಊರುಗಳಲ್ಲಿ ದುಡಿಯುತ್ತಿರುವ ಇಲ್ಲಿನ ಸಾಪ್ಟವೇರ್ ಉದ್ಯೋಗಿಗಳು ಊರಿಗೆ ಮರಳಲಿದ್ದು, ಸ್ಥಳೀಯವಾಗಿ 15 ಸಾವಿರಕ್ಕೂ ಅಧಿಕ ಹೊಸ ಉದ್ಯೋಗ ಹುಟ್ಟಿಕೊಳ್ಳುವ ಅವಕಾಶಗಳಿವೆ. `ಐಟಿ ಕಂಪನಿಗಳಿಗೆ ಸರ್ಕಾರ ಜಾಗವನ್ನು ದೀರ್ಘಾವಧಿ ಲೀಸ್ ಆಧಾರದಲ್ಲಿ ಕೊಟ್ಟರೆ ಅಲ್ಲಿ ಆಯಾ ಕಂಪನಿಗಳೇ ಕಟ್ಟಡ ನಿರ್ಮಿಸಿಕೊಳ್ಳುತ್ತಾರೆ. ತಮ್ಮ ಅಗತ್ಯಕ್ಕೆ ತಕ್ಕಹಾಗೇ ಕ್ಷೇತ್ರವನ್ನು ಅಭಿವೃದ್ಧಿಪಡಿಸಿಕೊಳ್ಳಲಿದ್ದು, ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅನೇಕರಿಗೆ ಅನುಕೂಲವಾಗಲಿದೆ’ ಎಂಬುದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಅವರ ನಿಲುವು.
ಚಿಂತನಾ ಸಭೆಯಲ್ಲಿ ಒಕ್ಕೂರಲಿನ ಅಭಿಪ್ರಾಯ
ಈ ನಿಟ್ಟಿನಲ್ಲಿ ಸೋಮವಾರ ಮಾಗೋಡ ಕಾಲೋನಿಯ ವೀರ ಮಾರುತಿ ದೇಗುಲದಲ್ಲಿ ಟೆಕ್ ಪಾರ್ಕ್ ನಿರ್ಮಾಣ ಕುರಿತು ಅಭಿಪ್ರಾಯ ಸಂಗ್ರಹಣೆ ಸಭೆ ನಡೆದಿದ್ದು, ಈ ವಿಷಯ ಮಾಗೋಡಿನ ವೀರ ಮಾರುತಿ ದೇವಾಲಯದಿಂದ ಸ್ವರ್ಣವಲ್ಲಿ ಮಠಕ್ಕೆ ಸ್ಥಳಾಂತರವಾಗಿದೆ. ಸ್ವರ್ಣವಲ್ಲಿ ಶ್ರೀಗಳ ಮುಂದಾಳತ್ವದಲ್ಲಿ ಈ ಬಗ್ಗೆ ಚಿಂತನಾ ಸಭೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟಗಾರರು ಉದ್ದೇಶಿಸಿದ್ದಾರೆ. `ಟೆಕ್ ಪಾರ್ಕ ನಿರ್ಮಾಣದಿಂದ ಪರಿಸರಕ್ಕೂ ಹಾನಿ ಇಲ್ಲ. ಜನರಿಗೂ ಅನುಕೂಲ’ ಎಂಬ ಬಗ್ಗೆ ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ನಾಗರಾಜ ಕೌಡಿಕೆರೆ, ಜಿ ಎನ್ ಭಟ್ ತಟ್ಟಿಗದ್ದೆ ಅಭಿಪ್ರಾಯಪಟ್ಟಿದ್ದಾರೆ. ಆ ಭಾಗದ ಮುಖಂಡರಾದ ಟಿ ಆರ್ ಹೆಗಡೆ, ನರಸಿಂಹ ಕೋಣೆಮನೆ,ಪರಮೇಶ್ವರ ಕೊಂಬೆ, ನಿರಂಜನ ಭಟ್ಟ, ಗಣೇಶ ಹೆಗಡೆ, ವೆಂಕಟ್ರಮಣ ಭಟ್ಟ ಕಿರುಕುಂಭತ್ತಿ ಮೊದಲಾದವರು ಮುಂದಿನ ಹೋರಾಟದ ಬಗ್ಗೆ ಚಿಂತನೆ ನಡೆಸಿದ್ದಾರೆ.





