ಯಲ್ಲಾಪುರ ತಾಲೂಕಿನ ಶೀಗೆಪಾಲ್ ಹಾಗೂ ಅಣಲಗಾರ್ ಊರಿನಲ್ಲಿ ಯಾರೂ ತಂಬಾಕು ಬಳಕೆ ಮಾಡುವುದಿಲ್ಲ. ತಂಬಾಕು ಉತ್ಪನ್ನಗಳಾದ ಗುಟ್ಕಾ, ಬೀಡಿ-ಸಿಗರೇಟು ಬಳಸುವವರು ಸಹ ಇಲ್ಲಿಲ್ಲ!
ಯಲ್ಲಾಪುರ ತಾಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಶೀಗೆಪಾಲ್ ಊರು ಬರುತ್ತದೆ. ಅಣಲಗಾರವೂ ನಂದೂಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುತ್ತದೆ. ಅಡಿಕೆ ಬೆಳೆ ಇಲ್ಲಿನವರ ಪ್ರಮುಖ ಆದಾಯ. ಅದಾಗಿಯೂ ಅಡಿಕೆ ಜೊತೆ ನಂಟು ಹೊಂದಿದ ತಂಬಾಕು ಇಲ್ಲಿನವರಿಗೆ ಎಂದಿಗೂ ಮುಖ್ಯ ಎನಿಸಿಲ್ಲ!
ಶೀಗೆಪಾಲ್ ಹಾಗೂ ಅಣಲಗಾರಿನ ಬಹುತೇಕ ಜನ ಸುಶಿಕ್ಷಿತರು. ತಂಬಾಕು ಹಾಗೂ ಅದರ ಬಳಕೆಯಿಂದ ಆಗುವ ಆರೋಗ್ಯ ಹಾನಿಯ ಬಗ್ಗೆ ಅಲ್ಲಿನವರಿಗೆ ಅರಿವಿದೆ. ಹೀಗಾಗಿ ಅನಾಧಿಕಾಲದಿಂದಲೂ ಆ ಊರಿನವರು ತಂಬಾಕಿನಿoದ ದೂರವೇ ಉಳಿದಿದ್ದಾರೆ. ಅಲ್ಲಿ-ಇಲ್ಲಿ ಒಂದಿಬ್ಬರು ತಂಬಾಕು ಉಪಯೋಗ ಮಾಡಿದ್ದು ಗಮನಕ್ಕೆ ಬಂದಾಗಲೂ ಊರಿನ ಹಿರಿಯರು ಅವರಿಗೆ ಬುದ್ದಿ ಹೇಳಿ ದುಶ್ಚಟ ಬಿಡಿಸಿದ್ದಾರೆ.
ಇನ್ನೂ, ಕೃಷಿ-ಹಾಗೂ ತೋಟಗಾರಿಕೆಯನ್ನು ನಂಬಿಕೊoಡಿರುವ ಈ ಎರಡು ಗ್ರಾಮಗಳಿಗೆ ಕೂಲಿ ಕೆಲಸಕ್ಕೆ ಬೇರೆ ಬೇರೆ ಊರುಗಳಿಂದ ಕಾರ್ಮಿಕರು ಬರುತ್ತಾರೆ. ಅವರಿಗೆ ಸಹ ಇಲ್ಲಿನವರು ಎಲೆ-ಅಡಿಕೆ ಜೊತೆ ತಂಬಾಕು ಕೊಡುವುದಿಲ್ಲ. ಮುಂಜಿ-ಮದುವೆ ಸೇರಿ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅತಿಥಿಗಳು ಆಗಮಿಸಿದರೂ ಅವರ ಸತ್ಕಾರದ ನೆಪದಲ್ಲಿ ತಂಬಾಕು ತರುವವರು ಕಾಣುವುದಿಲ್ಲ. ಮನೆಯಲ್ಲಿರುವ ಕವಳದ ಡಬ್ಬಿಗೂ ತಂಬಾಕಿನ ಕಂಪಿಲ್ಲ.
`ತಂಬಾಕು ಕಾನ್ಸರ್ ಸೇರಿ ಹಲವು ರೋಗಗಳಿಗೆ ಕಾರಣ. ಹಿರಿಯರಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ತಂಬಾಕು ದುಷ್ಪರಿಣಾಮದ ಬಗ್ಗೆ ಅರಿವಿದೆ. ಹೀಗಾಗಿ ನಮ್ಮ ಊರಿನಲ್ಲಿ ಯಾರೂ ತಂಬಾಕು ಸೇವಿಸುವುದಿಲ್ಲ’ ಎಂದು ಶೀಗೆಪಾಲಿನ ರಾಮಕೃಷ್ಣ ಭಾಗ್ವತ್ ಹೆಮ್ಮೆಯಿಂದ ಹೇಳಿದರು. `ಆರೋಗ್ಯ ಇಲಾಖೆಯಿಂದ ಅಣಲಗಾರಿನ ಮನೆ ಮನೆ ಸಮೀಕ್ಷೆ ನಡೆಸಿದ್ದು, ಇಲ್ಲಿ ಯಾರೂ ತಂಬಾಕು ವ್ಯಸನಿಗಳಿಲ್ಲ ಎಂಬುದು ಖಚಿತವಾಗಿದೆ’ ಎಂದು ನಂದೂಳ್ಳಿ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೇಟ್ ದೃಢಪಡಿಸಿದರು.
ಅಣಲಗಾರ ಊರು 76.41 ಹೆಕ್ಟರ್ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಒಟ್ಟು 19 ಮನೆಗಳಿವೆ. ಈಚೆಗಿನ ಮಾಹಿತಿ ಪ್ರಕಾರ ಆ ಊರಿನಲ್ಲಿ 56 ಜನ ವಾಸಿಸುತ್ತಿದ್ದಾರೆ. ಇನ್ನೂ ಶೀಗೆಪಾಲ್ ಗ್ರಾಮ 62 ಎಕರೆ ವಿಸ್ತೀರ್ಣದಲ್ಲಿದ್ದು, ಅಲ್ಲಿ ಏಳು ಮನೆಗಳಿವೆ. ಇಲ್ಲಿ 32 ಜನ ವಾಸವಾಗಿದ್ದಾರೆ. ಈ ಎರಡು ಊರಿನ ಜನ ಉದ್ಯೋಗಕ್ಕಾಗಿ ಬೇರೆ ಬೇರೆ ಊರುಗಳಲ್ಲಿದ್ದರೂ ಅವರೂ ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳಿಂದ ಬಹುದೂರ.
ಈ ಎಲ್ಲಾ ಹಿನ್ನಲೆ ಸರ್ಕಾರ `ಅಣಲಗಾರ್ ಹಾಗೂ ಶೀಗೆಪಾಲ್ ಗ್ರಾಮವನ್ನು ತಂಬಾಕು ಮುಕ್ತ ಊರು’ ಎಂದು ಘೋಷಿಸಲಿದೆ. ಶೀಘ್ರದಲ್ಲಿಯೇ ಸರ್ಕಾರದಿಂದ ಈ ಘೋಷಣೆ ಹೊರಬರಲಿದೆ.