ಉತ್ತರ ಕನ್ನಡ ಜಿಲ್ಲೆಯಲ್ಲಿ ಅವಧಿ ಪೂರ್ವ ಮಳೆಗಾಲ ಶುರುವಾಗಿದ್ದು, ಗುಡ್ಡದ ಅಂಚಿನಲ್ಲಿರುವ ಊರುಗಳಲ್ಲಿ ಆತಂಕ ಹೆಚ್ಚಾಗಿದೆ. ಭೂ ಕುಸಿತದ ಮುನ್ನಚ್ಚರಿಕಾ ಕ್ರಮವಾಗಿ ಅಪಾಯದ ಸ್ಥಿತಿಯಲ್ಲಿರುವ ಊರಿನ ಜನರಿಗೆ ಜಿಲ್ಲಾಡಳಿತ ಊರು ತೊರೆಯುವಂತೆ ನೋಟಿಸ್ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಅವೈಜ್ಞಾನಿಕ ರೀತಿ ಗುಡ್ಡ ಕೊರೆಯಲಾಗಿದೆ. ಹೀಗಾಗಿ ಹಲವು ಊರುಗಳಲ್ಲಿ ಗುಡ್ಡ ಕುಸಿತದ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 439 ಕಡೆ ಗುಡ್ಡ ಕುಸಿಯುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದರಲ್ಲಿ ಹಲವು ವಸತಿ ಪ್ರದೇಶಗಳು ಇದ್ದು, ಆ ವಸತಿ ಪ್ರದೇಶದ ಜನರನ್ನು ಇದೀಗ ಒಕ್ಕಲೆಬ್ಬಿಸಲಾಗುತ್ತಿದೆ. ದುಡ್ಡಿದ್ದವರು ಮಾಡಿದ ತಪ್ಪಿಗೆ ಅಮಾಯಕರು ಹಿಂಸೆ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ಅನೇಕ ಕಡೆ ವ್ಯಾಪಕ ಪ್ರಮಾಣದಲ್ಲಿ ಬೆಟ್ಟ-ಗುಡ್ಡಗಳನ್ನು ಕೊರೆಯಲಾಗಿದೆ. ವಿವಿಧ ಸರ್ಕಾರಿ ಯೋಜನೆ, ಖಾಸಗಿ ರೆಸಾರ್ಟು, ರಸ್ತೆ-ತೋಟ ವಿಸ್ತರಣೆ ನೆಪದಲ್ಲಿ ಭಾರೀ ಪ್ರಮಾಣದ ಮಣ್ಣು ಅಗೆಯಲಾಗಿದೆ. ಪರಿಣಾಮ ಗುಡ್ಡದ ಮೇಲಿನ ಕಲ್ಬಂಡೆಗಳು ನೆಲಕ್ಕೆ ಅಪ್ಪಳಿಸುತ್ತಿದ್ದು, ಮರ-ಗಿಡಗಳ ಬುಡ ಸಡಿಲವಾಗಿದೆ. ಮಳೆ ನೀರು ಸರಾಗವಾಗಿ ಹೋಗಲು ದಾರಿಯೇ ಇಲ್ಲದ ಕಾರಣ ಗುಡ್ಡ ಕುಸಿತವಾಗುತ್ತಿದೆ. ಜಿಲ್ಲೆಯಲ್ಲಿ ಹಾದು ಹೋದ ರಾಷ್ಟಿಯ ಹೆದ್ದಾರಿಗಳ ಪೈಕಿ 19 ಕಡೆ ಗುಡ್ಡ ಕುಸಿತದ ಅಪಾಯದ ಸನ್ನಿವೇಶಗಳಿದೆ. ಮಳೆಗಾಲದ ಕಾರಣ ಹೆದ್ದಾರಿ ಅಂಚಿನಲ್ಲಿ ಅಂಗಡಿ ಹಾಕಿಕೊಂಡವರ ಬದುಕು ಅತಂತ್ರವಾಗಿದೆ.
ಸದ್ಯ ಇನ್ನೂ ಜೋರು ಮಳೆಗಾಲ ಶುರುವಾಗಿಲ್ಲ. ಅದಾಗಿಯೂ ಗುಡ್ಡದ ತಪ್ಪಲಿನಲ್ಲಿರುವವರಲ್ಲಿನ ಆತಂಕ ಜೋರಾಗಿದೆ. ಇದಕ್ಕೆ ಪೂರಕವಾಗಿ ಮಳೆ ಶುರುವಾಗುವ ಮುನ್ನವೇ ಮನೆ ತೊರೆಯುವಂತೆ ಜಿಲ್ಲಾಡಳಿತ ನೋಟಿಸ್ ನೀಡುತ್ತಿದೆ. ಕಾರವಾರದಲ್ಲಿ 35, ಅಂಕೋಲಾದಲ್ಲಿ 39 ಜನವಸತಿ ಪ್ರದೇಶದ ಜನರಿಗೆಈಗಾಗಲೇ ನೋಟಿಸ್ ನೀಡಲಾಗಿದೆ. ಕುಮಟಾದಲ್ಲಿನ 12 ಊರುಗಳಲ್ಲಿನ 29 ಮನೆಗಳಿಗೆ ನೋಟಿಸ್ ನೀಡಲು ಉದ್ದೇಶಿಸಲಾಗಿದೆ. ಮನೆ ಖಾಲಿ ಮಾಡಿ ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆಯುವಂತೆ ನೋಟಿಸ್ ಮೂಲಕ ಸೂಚಿಸಲಾಗುತ್ತಿದೆ.
ಕಳೆದ ವರ್ಷ ಶಿರೂರು ಗುಡ್ಡ ಕುಸಿತವಾದ ಪರಿಣಾಮ ಜನ ಹೆದರಿದ್ದಾರೆ. ಇದರೊಂದಿಗೆ ಜಿಲ್ಲೆಯ ಅನೇಕ ಕಡೆ ಕಲ್ಪಂಡೆಗಳು ನೆಲಕ್ಕೆ ಅಪ್ಪಳಿಸುತ್ತಿದೆ. ಈ ನಡುವೆ ಮನೆ ಬಿಡುವಂತೆ ನೋಟಿಸ್ ಬಂದಿರುವುದರಿAದ ಜನ ಇನ್ನಷ್ಟು ಕಂಗಾಲಾಗಿದ್ದಾರೆ. ಶಾಲೆಗಳ ಪಕ್ಕದಲ್ಲಿಯೇ ಗುಡ್ಡ ಕುಸಿತ, ಶಾಲೆ ಒಳಗೆ ಮಳೆ ನೀರು ಬರುವುದರಿಂದ ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಿದ ಶಾಲೆಗಳು ಎಷ್ಟು ಸುರಕ್ಷಿತ? ಎಂದು ಸಹ ಜನ ಪ್ರಶ್ನಿಸುತ್ತಿದ್ದಾರೆ.