ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ರಿಕ್ಷಾಗೆ ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾದಲ್ಲಿದ್ದ ಒಬ್ಬರು ಸಾವನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಮೇ 29ರ ರಾತ್ರಿ ಹುಬ್ಬಳ್ಳಿಯಿಂದ ಯಲ್ಲಾಪುರದ ಕಡೆ ಅಥಣಿಯ ಅಸ್ಲಾಂ ಇನಾಮದಾರ್ ಎಂಬಾತರು ಜೋರಾಗಿ ಕೆಎಸ್‌ಆರ್‌ಟಿಸಿ ಬಸ್ಸು ಓಡಿಸುತ್ತಿದ್ದರು. ಯಲ್ಲಾಪುರದ ಗಣಪತಿಗಲ್ಲಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುವ ಪ್ರತೀಕ ಕೋಟಾರಕರ್ ಅವರು ತಮ್ಮ ಕುಟುಂಬದ ಜೊತೆ ರಿಕ್ಷಾದಲ್ಲಿ ಹೋಗುತ್ತಿದ್ದರು. ಹುಬ್ಬಳ್ಳಿ ರಸ್ತೆಯ ತೆಂಗನಗಿರಿ ತಿರುವು ದಾಟಿ ಕೊಂಚ ಮುಂದೆ ಹೋಗುತ್ತಿರುವಾಗ ಆ ಬಸ್ಸು ರಿಕ್ಷಾಗೆ ಹಿಂದಿನಿoದ ಡಿಕ್ಕಿ ಹೊಡೆಯಿತು.
ಅಪಘಾತದ ರಭಸಕ್ಕೆ ಪ್ರತೀಕ ಕೋಟಾರಕರ್ ಅವರ ಅಜ್ಜಿ ಸಂತಾನ ಕೋಟಾರಕರ್ ಅಲ್ಲಿಯೇ ಸಾವನಪ್ಪಿದರು. ಪ್ರತೀಕ ಅವರ ತಾಯಿ ಸುನಿತಾ ಕೋಟಾರಕರ್, ತಂಗಿ ಸ್ವಾತಿ ಹಾಗೂ ಪಾಲ್ಗುಣಿ ಎಂಬಾತರು ಗಾಯಗೊಂಡರು. ಈ ಅಪಘಾತದಲ್ಲಿ ಪ್ರತೀಕ ಕೋಟಾರಕರ್ ಸಹ ಗಾಯಗೊಂಡರು. `ರಿಕ್ಷಾಗೆ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸಿದ ಬಗ್ಗೆ ಅರಿವಿದ್ದರೂ ಬಸ್ ಚಾಲಕ ವೇಗವಾಗಿ ಬಂದು ಗುದ್ದಿದ್ದರಿಂದ ಈ ಅಪಘಾತವಾಗಿದೆ. ಇದರಿಂದ ಬಸ್ಸು ಹಾಗೂ ರಿಕ್ಷಾ ಜಖಂ ಆಗಿದೆ’ ಎಂದು ಪ್ರತೀಕ ಕೋಟಾರಕರ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಸ್ ಚಾಲಕ ಅಸ್ಲಾಂ ಇನಾಮದಾರ್ ವಿರುದ್ಧ ಕಠಿಣ ಕ್ರಮಕ್ಕಾಗಿ ಅವರು ಒತ್ತಾಯಿಸಿದ್ದಾರೆ.