ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಉಚ್ಚಾಟಿಸಿದೆ. ಅದರ ಬೆನ್ನಲ್ಲೆ ಕಾಂಗ್ರೆಸ್ಸಿಗರು ಸಹ ಶ್ರೀನಿವಾಸ ಭಟ್ಟ ಧಾತ್ರಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ!
ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಶ್ರೀನಿವಾಸ ಭಟ್ಟ ಧಾತ್ರಿ ಅವರು ದಿಢೀರ್ ಆಗಿ ರಾಜಕೀಯ ಪ್ರವೇಶಿಸಿದರು. ಬಿಜೆಪಿ ಸೇರಿದ ಆರೇ ತಿಂಗಳಿನಲ್ಲಿ ಅವರು ಕಾಂಗ್ರೆಸ್ಸಿಗೆ ಹಾರಿದರು. ವಿಧಾನಸಭಾ ಚುನಾವಣೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಬಿಜೆಪಿ ಶಿವರಾಮ ಹೆಬ್ಬಾರ್ ಅವರಿಗೆ ಬಿ ಪಾರಂ ನೀಡಿದನ್ನು ಸಹಿಸಿಕೊಳ್ಳದ ಶ್ರೀನಿವಾಸ ಭಟ್ಟ ಧಾತ್ರಿ ಅವರು ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರ ಜೊತೆ ಸೇರಿ ಕಾಂಗ್ರೆಸ್ಸಿಗೆ ಹಾರಿದರು.
ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರ ಮೂಲಕ ಕಾಂಗ್ರೆಸ್ಸಿನ ಟಿಕೆಟ್‌ಪಡೆಯಲು ಪೈಪೋಟಿ ನಡೆಸಿದರು. ಕಾಂಗ್ರೆಸ್ ವಿ ಎಸ್ ಪಾಟೀಲ್ ಅವರಿಗೆ ಟಿಕೆಟ್ ನೀಡಿದ ಕಾರಣ ಅಲ್ಲಿಯೂ ನಿರಾಸೆಗೊಂಡರು. ಶ್ರೀನಿವಾಸ ಭಟ್ಟ ಧಾತ್ರಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ಎಂದಿಗೂ ಹತ್ತಿರವಾಗಲಿಲ್ಲ. ಹಳೆಯ ಬಿಜೆಪಿಗರ ನಂಟನ್ನು ಅವರು ಬಿಡಲಿಲ್ಲ.
ಬಿಜೆಪಿ ಸೇರಿದ ಆರೇ ತಿಂಗಳಿನಲ್ಲಿ ಆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ಶ್ರೀನಿವಾಸ ಭಟ್ಟ ಧಾತ್ರಿ ಅವರು ಇದೀಗ ಕಾಂಗ್ರೆಸ್ಸಿನಲ್ಲಿ ಏನೂ ಅಲ್ಲ. ಕಾಂಗ್ರೆಸ್ಸಿನಲ್ಲಿ ಮೂರು ವರ್ಷ ಕಳೆದರೂ ಅವರಿಗೆ ಆ ಪಕ್ಷ ಯಾವುದೇ ಅಧಿಕೃತ ಹುದ್ದೆ ನೀಡಿಲ್ಲ. ಬಿಜೆಪಿ ಸೇರಿದ ಶುರುವಿನಲ್ಲಿ ಶ್ರೀನಿವಾಸ ಭಟ್ಟ ಧಾತ್ರಿ ಅವರು ಕೆಲ ಶಾಲೆಗಳಿಗೆ ನೆರವು ನೀಡಿದ್ದರು. ಕಬ್ಬಡ್ಡಿ-ವಾಲಿಬಾಲ್ ಕ್ರೀಡಾಕೂಟಗಳಿಗೆ ಹಣ ಸಹಾಯ ಮಾಡಿದ್ದರು. ಶಾಲೆಯೊಂದಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿ ಮಾತು ತಪ್ಪಿದ್ದರು. ಬಿಜೆಪಿ ಟಿಕೆಟ್ ವಂಚಿತರಾದ ನಂತರ ಅವರು ಕಾಂಗ್ರೆಸ್ ಸೇರಿದ್ದು, ಆ ವೇಳೆಯಲ್ಲಿಯೂ ಕೆಲವರಿಗೆ ಸಹಾಯ ಮಾಡಿದ್ದರು. ಆದರೆ, ವಿಧಾನಸಭಾ ಚುನಾವಣೆ ಮುಗಿದ ನಂತರ ಅವರು ಕ್ಷೇತ್ರದಲ್ಲಿ ಸಕ್ರಿಯವಾಗಿರಲಿಲ್ಲ. ಆರ್ ವಿ ದೇಶಪಾಂಡೆ ಅವರೇ ಯಲ್ಲಾಪುರ ಕ್ಷೇತ್ರಕ್ಕೆ ಆಗಮಿಸಿದರೂ ಶ್ರೀನಿವಾಸ ಭಟ್ಟ ಧಾತ್ರಿ ಅವರು ಅವರ ಜೊತೆ ಕಾಣಿಸಿಕೊಳ್ಳುತ್ತಿಲ್ಲ.
ಅದಾಗಿಯೂ ಕಾಂಗ್ರೆಸ್ ಮುಖಂಡ ಎಂದು ಗುರುತಿಸಿಕೊಂಡಿರುವ ಶ್ರೀನಿವಾಸ ಭಟ್ಟ ಧಾತ್ರಿ ಅವರು ಇದೀಗ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಜೊತೆ ತಿರುಗಾಡುತ್ತಾರೆ. ಉಸ್ತುವಾರಿ ಸಚಿವರ ಜೊತೆ ಅತ್ಯಂತ ಆಪ್ತರಾಗಿರುವಂತೆ ತೋರಿಸಿಕೊಳ್ಳುತ್ತಾರೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರ ಯಾವ ಕೆಲಸವನ್ನು ಅವರು ಮಾಡಿಸಿದ ಉದಾಹರಣೆಗಳಿಲ್ಲ. ಬದಲಾಗಿ, ಬಿಜೆಪಿಯ ಅನೇಕರು ಧಾತ್ರಿ ಭಟ್ಟರನ್ನು ಹಿಡಿದು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ!
ಶ್ರೀನಿವಾಸ ಭಟ್ಟ ಧಾತ್ರಿ ಅವರು ಮೂಲತಃ ಯಲ್ಲಾಪುರದವರೇ ಆಗಿದ್ದರೂ ಯಲ್ಲಾಪುರದ ಜನರ ಜೊತೆ ನೇರವಾಗಿ ಸಂಪರ್ಕದಲ್ಲಿಲ್ಲ. ಮುಂಡಗೋಡು-ಬನವಾಸಿ ಭಾಗದ ಅನೇಕರಿಗೆ ಶ್ರೀನಿವಾಸ ಭಟ್ಟ ಧಾತ್ರಿ ಅವರ ಪರಿಚಯವೇ ಇಲ್ಲ. ಯಲ್ಲಾಪುರ-ಮುಂಡಗೋಡು-ಬನವಾಸಿ ಭಾಗದ ಕಾಂಗ್ರೆಸ್ ಪದಾಧಿಕಾರಿಗಳಿಗೂ ಶ್ರೀನಿವಾಸ ಭಟ್ಟ ಧಾತ್ರಿ ಅವರು ಆಪ್ತರಲ್ಲ. ಹಾಗಂತ, ಶ್ರೀನಿವಾಸ ಭಟ್ಟ ಧಾತ್ರಿ ಹಾಗೂ ಈಗಿನ ಪದಾಧಿಕಾರಿಗಳ ನಡುವೆ ವೈರತ್ವವೂ ಇಲ್ಲ.
ಕಾಂಗ್ರೆಸ್ ಸೇರಿದ್ದ ಶ್ರೀನಿವಾಸ ಭಟ್ಟ ಧಾತ್ರಿ ಅವರು ಕಾಂಗ್ರೆಸ್ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ ಎಂಬುದು ಅವರ ಮೇಲಿನ ದೊಡ್ಡ ಆರೋಪ. ಉಸ್ತುವಾರಿ ಸಚಿವರನ್ನು ಮುಂದಿರಿಸಿಕೊAಡು ಉಳಿದ ಪದಾಧಿಕಾರಿಗಳ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂಬುದು ಅವರ ಉಚ್ಚಾಟನೆ ಆಗ್ರಹಕ್ಕೆ ಒಂದು ನೆಪ.
ಸದ್ಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಶ್ರೀನಿವಾಸ ಭಟ್ಟ ದಾತ್ರಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ರಾಜ್ಯ ನಾಯಕರಿಗೆ ಪತ್ರ ಬರೆದಿದ್ದಾರೆ. ಹೊರಗಡೆಯಿಂದ ಕಾಂಗ್ರೆಸ್ಸು, ಒಳಮನಸ್ಸು ಬಿಜೆಪಿ ಎನ್ನುತ್ತಿರುವ ಶ್ರೀನಿವಾಸ ಭಟ್ಟ ಧಾತ್ರಿ ಅವರು ಚುನಾವಣೆ ಸಮೀಪ ಬಂದಾಗ ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಿದ್ದು, ಸದ್ಯ ಈ ಉಚ್ಚಾಟನೆಗಾಗಿಯೇ ಕಾಯುತ್ತಿದ್ದಾರೆ.