ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ `ಟೆಕ್ ಪಾರ್ಕ್’ ನಿರ್ಮಾಣ ವಿಷಯವಾಗಿ ಹೋರಾಟಗಾರರು ಸೋಂದಾ ಸ್ವರ್ಣವಲ್ಲಿ ಶ್ರೀಗಳನ್ನು ಭೇಟಿ ಮಾಡಿದ್ದಾರೆ. `ಹೋರಾಟ ಮುಂದುವರೆಸಿ.. ನಾನು ನಿಮ್ಮ ಜೊತೆಗಿರುವೆ’ ಎಂದು ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಧೈರ್ಯ ತುಂಬಿದ್ದಾರೆ.
ಬೇಡ್ತಿ ಜಲ ವಿದ್ಯುತ್ ಯೋಜನೆಗಾಗಿ ಸರ್ಕಾರ ಈ ಹಿಂದೆ ಆಸಕ್ತಿವಹಿಸಿದ್ದು, ಈ ವೇಳೆ ಮಾಗೋಡಿನಲ್ಲಿ ನೂರಾರು ಎಕರೆ ಭೂಮಿಯನ್ನು ಈ ಯೋಜನೆಗಾಗಿ ಮೀಸಲಿಟ್ಟಿತ್ತು. ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಅವರ ನೇತ್ರತ್ವದಲ್ಲಿಯೇ ಆ ವೇಳೆ `ಪರಿಸರ ಉಳಿಸಿ’ ಎಂಬ ಹೋರಾಟ ನಡೆದಿತ್ತು. ಸಾವಿರಾರು ಜನ ಪ್ರತಿಭಟಿಸಿದ ಕಾರಣ ಸರ್ಕಾರ ಉದ್ದೇಶಿಸಿದ್ದ ಬೇಡ್ತಿ ಜಲ ವಿದ್ಯುತ್ ಯೋಜನೆ ನೆನೆಗುದಿಗೆ ಬಿದ್ದಿತು. ಆದರೆ, ಮಾಗೋಡಿನಲ್ಲಿ ಸರ್ಕಾರ ಮೀಸಲಿಟ್ಟ ಭೂಮಿ ಪಾಳು ಬಿದ್ದಿತು. ಈ ಭೂಮಿಯಲ್ಲಿ `ಐಟಿ ಪಾರ್ಕ’ ಸ್ಥಾಪಿಸಬೇಕು ಎಂಬುದು ಈಗಿನ ಬೇಡಿಕೆ.
`ಸೋಂದಾ ಸ್ವರ್ಣವಲ್ಲಿ ಶ್ರೀಗಳ ನೇತ್ರತ್ವದಲ್ಲಿ ಹೋರಾಟ ನಡೆದ ಪರಿಣಾಮ ಈ ಭಾಗದ ಪರಿಸರ ಉಳಿದಿದೆ. ಹೀಗಾಗಿ ಅವರ ಮುಂದಾಳತ್ವದಲ್ಲಿಯೇ ಐಟಿ ಪಾರ್ಕ ನಿರ್ಮಾಣದ ಹೋರಾಟ ಶುರು ಮಾಡೋಣ’ ಎಂದು ಸ್ಥಳೀಯರು ಮಾತನಾಡಿಕೊಂಡಿದ್ದರು. ಈ ಹಿನ್ನಲೆ ಶನಿವಾರ ಪ್ರಮುಖ ಹೋರಾಟಗಾರರು ಶ್ರೀಗಳ ಬಳಿ ತೆರಳಿ ವಿಷಯ ಪ್ರಸ್ತಾಪಿಸಿದರು. `ಮಾಗೋಡಿನಲ್ಲಿ ಐಟಿ ಪಾರ್ಕ ಮಾಡಿದರೆ ಐಟಿ ಕಂಪನಿ ಬರುವ ಸಾಧ್ಯತೆಯಿದೆಯೇ?’ ಎಂದು ಈ ವೇಳೆ ಶ್ರೀಗಳು ಪ್ರಶ್ನಿಸಿದರು. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಹೋರಾಟ ನಡೆಸುವಂತೆ ಸೂಚಿಸಿದರು.
`ಈಗಾಗಲೇ ಹಲವು ಕಂಪನಿಯವರ ಜೊತೆ ಮಾತನಾಡಲಾಗಿದ್ದು, ಮಾಗೋಡು ಪರಿಸರದ ಬಗ್ಗೆ ಕಂಪನಿ ಮುಖ್ಯಸ್ಥರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಇಲ್ಲಿ ಐಟಿ ಪಾರ್ಕ ಆದಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗಲಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ನಿರ್ಧರಿಸಲಾಗಿದ್ದು, ಸ್ಥಳೀಯವಾಗಿ ಉದ್ಯೋಗ ಸೃಷ್ಠಿ ಆಗುವುದರಿಂದ ಹಳ್ಳಿಗಳು ವೃದ್ಧಾಶ್ರಮವಾಗಿ ಬದಲಾಗುತ್ತಿರುವುದಕ್ಕೆ ಕಡಿವಾಣ ಬೀಳಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮನವರಿಕೆ ಮಾಡಿದರು. `ಹಳ್ಳಿಗಳು ವೃದ್ಧಾಶ್ರಮ ಆಗಲು ಬಿಡಬಾರದು ಎಂದು ಮಠವೂ ಮೊದಲಿನಿಂದಲೂ ಪ್ರಯತ್ನಿಸುತ್ತಿದೆ. ಐಟಿ ಪಾರ್ಕ ಸ್ಥಾಪನೆಯಿಂದ ಉದ್ಯೋಗ ಸೃಷ್ಠಿ ಜೊತೆ ಸ್ಥಳೀಯ ಅಭಿವೃದ್ಧಿಯೂ ಆಗುತ್ತದೆ ಎಂದಾದರೆ ನಿಮ್ಮೆಲ್ಲರ ಜೊತೆ ನಾನಿದ್ದೇನೆ’ ಎಂದು ಶ್ರೀಗಳು ಅಭಯ ನೀಡಿದರು.
20 ನಿಮಿಷಗಳ ಕಾಲ ಈ ಬಗ್ಗೆ ಚರ್ಚೆ ನಡೆಯಿತು. ಮಾಗೋಡು ಭಾಗದ ಪ್ರಮುಖರಾದ ನಾಗರಾಜ ಕೌಡಿಕೆರೆ, ಜಿ ಎನ್ ಭಟ್ ತಟ್ಟಿಗದ್ದೆ, ಸುಬ್ರಾಯ ಭಟ್ಟ ದಾನ್ಯಾನಕೊಪ್ಪ, ಸುಬ್ಬಣ್ಣ ಉದ್ದಾಬೈಲ, ನಿರಂಜನ ಭಟ್ಟ, ರಾಘವೇಂದ್ರ ಭಟ್ಟ, ಗಣಪತಿ ಭಟ್ಟ ಕೌಡಿಕೆರೆ, ಮಹಾಬಲೇಶ್ವರ ಹೆಗಡೆ, ಅಂಕಿತ ಹೆಗಡೆ ಇತರರು ಶ್ರೀಗಳ ದರ್ಶನಪಡೆದರು.