ಶಿರಸಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಶ್ರೀಕುಮಾರ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ. ಹೀಗಾಗಿ ಬಸ್ಸಿನಲ್ಲಿದ್ದ ಬೆಂಗಳೂರು ಪ್ರಯಾಣಿಕರು ಅರ್ದ ದಾರಿಯಲ್ಲಿಯೇ ತೊಂದರೆ ಅನುಭವಿಸಿದರು.
ಶುಕ್ರವಾರ ರಾತ್ರಿ ಶಿರಸಿಯಿಂದ ಹೊರಟ ಬಸ್ಸಿಗೆ ಅಕ್ಕಿ ಆಲೂರಿನ ಬಳಿ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಪರಿಣಾಮ ಬಸ್ಸಿನ ಗಾಜು ಪುಡಿಪುಡಿಯಾಗಿದೆ. ಕಿಟಕಿ ಪಕ್ಕದ ಗಾಜು ಒಡೆದಿದ್ದರಿಂದ ಬಸ್ಸಿನ ಒಳಭಾಗ ಗಾಜಿನ ಪುಡಿ ಬಿದ್ದಿದ್ದು, ಇದರಿಂದ ಪ್ರಯಾಣಿಕರು ಕಂಗಾಲಾದರು. ಬಸ್ಸಿನ ಸಿಬ್ಬಂದಿ ಕಿಡಿಗೇಡಿಗಳ ಪತ್ತೆಗೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಈ ಬಸ್ಸಿನಲ್ಲಿ 30 ಜನ ಪ್ರಯಾಣಿಕರಿದ್ದರು. ರಭಸವಾಗಿ ಬಂದ ಕಲ್ಲು ಕಿಟಕಿಗೆ ತಾಗಿದ್ದರಿಂದ ಯಾರಿಗೂ ಆಪತ್ತು ಆಗಲಿಲ್ಲ. ಈ ಹಿಂದೆ ಸಹ ಈ ಭಾಗದಲ್ಲಿ ಅನೇಕ ಬಸ್ಸುಗಳಿಗೆ ಕಿಡಿಗೇಡಿಗಳು ಕಲ್ಲು ಹೊಡೆದು ವಿಕೃತಿ ಮೆರೆದಿದ್ದರು. ಆರು ತಿಂಗಳ ಹಿಂದೆಯೂ ಬಸ್ಸಿಗೆ ಕಲ್ಲು ತಾಗಿತ್ತು. ಸದ್ಯ ಶ್ರೀಕುಮಾರ ಬಸ್ಸಿಗೆ ಕಲ್ಲು ಹೊಡೆದ ವಿಷಯ ತಿಳಿದ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುವುದಾಗಿ ಭರವಸೆ ನೀಡಿದ್ದಾರೆ.
`ಬಸ್ಸಿಗೆ ಕಲ್ಲು ಹೊಡೆದವರು ಯಾರು ಎಂದು ಗೊತ್ತಾಗಿಲ್ಲ. ಬಸ್ಸಿನ ಒಳಗೆ ಬಿದ್ದ ಗಾಜುಗಳನ್ನು ಸ್ವಚ್ಛಗೊಳಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಬಿಡಲಾಗಿದೆ’ ಎಂದು ಶ್ರೀಕುಮಾರ ಬಸ್ ಮುಖ್ಯಸ್ಥ ಪುಟ್ಟ ಹೆಗಡೆ ಅವರು ಪ್ರತಿಕ್ರಿಯಿಸಿದರು.