ಶಿರಸಿ ಹಾಗೂ ಕಾರವಾರ ಲೋಕೋಪಯೋಗಿ ಇಲಾಖೆಗೆ ಒಳಪಡುವ ಧಾರವಾಡದ ಮುಖ್ಯ ಇಂಜಿನಿಯರ್ ಎಚ್ ಸುರೇಶ ತಮ್ಮ ನಿವೃತ್ತಿಯ ಕೊನೆಯ ದಿನ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ನಿವೃತ್ತಿ ಹಿನ್ನಲೆ ಬೀಳ್ಕೊಡುಗೆ ಸಮಾರಂಭಕ್ಕೆ ಸಿದ್ಧವಾಗಿದ್ದ ಸುರೇಶ ಅವರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕೆಲ ಗುತ್ತಿಗೆದಾರರು ಸಹ ಎಚ್ ಸುರೇಶ ವಿರುದ್ಧ ಹಿಂದೊಮ್ಮೆ ಆರೋಪ ಮಾಡಿದ್ದರು. ಕೆಲಸ ಮಾಡಿದ ಹಣ ಪಾವತಿಗೆ ಅನಗತ್ಯವಾಗಿ ಕಾಡಿಸುವ ಬಗ್ಗೆ ದೂರಿದ್ದರು. ಸದ್ಯ ಎಚ್ ಸುರೇಶ ಅವರು ತಮ್ಮ ಸೇವಾ ಅವಧಿಯಲ್ಲಿ 3ಕೋಟಿ ರೂಪಾಯಿಗೂ ಅಧಿಕ ಅಕ್ರಮ ಆಸ್ತಿಗಳಿಸಿರುವುದು ಲೋಕಾಯುಕ್ತರ ದಾಳಿಯಲ್ಲಿ ಗೊತ್ತಾಗಿದೆ. ಅವರಿಗೆ ಸರ್ಕಾರ ನೀಡಿದ ಮನೆಯಲ್ಲಿಯೇ ರಾಶಿ ರಾಶಿ ಚಿನ್ನಾಭರಣಗಳು ಸಿಕ್ಕಿವೆ. ಅವರಿಗೆ ಸಿಗುತ್ತಿದ್ದ ಸರ್ಕಾರಿ ಸಂಬಳ ಹಾಗೂ ಅವರುಗಳಿಸಿದ ಆಸ್ತಿಗೆ ಕಿಂಚಿತ್ತು ತಾಳೆ ಆಗುತ್ತಿಲ್ಲ.
75 ಸಾವಿರ ರೂ ಹಣ, 28.58 ಲಕ್ಷ ರೂ ಮೌಲ್ಯದ ಚಿನ್ನ, 2.5 ಕೆಜಿ ಬೆಳ್ಳಿ, 26 ಲಕ್ಷ ರೂ ಮೌಲ್ಯದ ಎರಡು ಕಾರು, 25 ಲಕ್ಷ ರೂ ಮೌಲ್ಯದ ಪಿಠೋಪಕರಣ, 2.60 ಕೋಟಿ ರೂ ಮೌಲ್ಯದ ಮನೆ, 11 ಎಕರೆ ಕೃಷಿಭೂಮಿ, 13 ಲಕ್ಷ ರೂ ಮೌಲ್ಯದ ಎರಡು ಸೈಟ್, 50 ಲಕ್ಷ ರೂ ಮೌಲ್ಯದ ಆರು ವಾಣಿಜ್ಯ ಮಳಿಗೆಗಳಿಗೆ ಸುರೇಶ್ ಎಚ್ ಒಡೆಯರಾಗಿದ್ದಾರೆ. ಆದರೆ, ಈ ಆಸ್ತಿಗೆ ಅವರ ಬಳಿ ಲೆಕ್ಕವೇ ಇಲ್ಲ.
ಸಂಜೆ 4 ಗಂಟೆಯವರೆಗೂ ಲೋಕಾಯುಕ್ತ ಅಧಿಕಾರಿಗಳು ಸುರೇಶ ಅವರ ಮನೆ ಶೋಧ ನಡೆಸಿದರು. ಗದಗ ಹಾಗೂ ಬೆಳಗಾವಿಯಲ್ಲಿ ಸಹ ಸುರೇಶ ಆಸ್ತಿ ಮಾಡಿದ್ದು, ಅಲ್ಲಿಯೂ ದಾಳಿ ನಡೆಸಿದರು. ಆಸ್ತಿಯ ಕುರಿತು ಲೆಕ್ಕಾಚಾರದ ಬಗ್ಗೆ ಲೋಕಾಯುಕ್ತರು ಪ್ರಶ್ನಿಸುತ್ತಿದ್ದು, ಸುರೇಶ ಅವರು ತಲೆ ಮೇಲೆ ಕಯ ಹೊತ್ತು ಕುಳಿತಿದ್ದರು.