ಹೊನ್ನಾವರದ ಸುಬ್ರಾಯ ನಾಯ್ಕ ಅವರು ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಲೋಕೋ ಪೈಲೆಟ್ ಸಾಕಷ್ಟು ಹಾರ್ನ ಹಾಕಿದರೂ ಅದು ಸುಬ್ರಾಯ ನಾಯ್ಕ ಅವರಿಗೆ ಕೇಳಿಸದ ಕಾರಣ ರೈಲು ಗುದ್ದಿ ಅವರು ಪ್ರಾಣ ಬಿಟ್ಟಿದ್ದಾರೆ.
ಹೊನ್ನಾವರ ಮಂಕಿ ಬಳಿಯ ಗುಳದಗೇರಿಯಲ್ಲಿ ಸುಬ್ರಾಯ ನಾಯ್ಕ (60) ಅವರು ವಾಸವಾಗಿದ್ದರು. ಸುಬ್ರಾಯ ನಾಯ್ಕ ಅವರಿಗೆ ಮೊದಲಿನಿಂದಲೂ ಸರಿಯಾಗಿ ಕಿವಿ ಕೇಳುತ್ತಿರಲಿಲ್ಲ. ಅದಾಗಿಯೂ ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಪ್ರತಿ ಗುರುವಾರ ದೇವರ ದರ್ಶನಕ್ಕೆ ಹೋಗುತ್ತಿದ್ದರು. ಮೇ 29ರಂದು ಸಹ ಜಟಗೇಶ್ವರ ದೇವಾಲಯಕ್ಕೆ ಹೋಗಿ ಬರುವ ಸಿದ್ಧತೆ ಮಾಡಿಕೊಂಡಿದ್ದರು. ಆ ದಿನ ಬೆಳಗ್ಗೆ 8.50ರ ವೇಳೆಗೆ ಅವರು ದೇವಾಲಯಕ್ಕೆ ನಡೆದು ಹೋಗುತ್ತಿದ್ದರು.
ಮಂಕಿ-ರಾಮನಗರ ಕ್ರಾಸಿನಿಂದ ಅರಣ್ಯ ಮಾರ್ಗವಾಗಿ ಕಿರ್ಲೆ ರೈಲ್ವೆ ಗೇಟ್ ಬಳಿ ಅವರು ಸಾಗಿದಾಗ ಭಟ್ಕಳದಿಂದ ಹೊನ್ನಾವರ ಕಡೆ ಹೋಗುತ್ತಿದ್ದ ಓಕಾ ಎಕ್ಸಪ್ರೆಸ್ ಅಲ್ಲಿಗೆ ಆಗಮಿಸಿತು. ರೈಲು ಓಡಿಸುತ್ತಿದ್ದ ಲೋಕೋ ಪೈಲೆಟ್ ಸಾಕಷ್ಟು ಬಾರಿ ಹಾರ್ನ ಮಾಡಿದರು. ಹಳಿ ಅಂಚಿನಲ್ಲಿಯೇ ಹೋಗುತ್ತಿರುವ ಬಗ್ಗೆ ನಂಬಿದ್ದ ಸುಬ್ರಾಯ ನಾಯ್ಕ ಅವರು ಒಮ್ಮೆ ಹಳಿ ಮೆಟ್ಟಿದ್ದು, ಈ ವೇಳೆ ರೈಲು ಅವರನ್ನು ಗುದ್ದಿತು. ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಹಾರಿಬಿದ್ದ ಸುಬ್ರಾಯ ನಾಯ್ಕ ಅವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟರು.
ಸೆಂಟ್ರಿ0ಗ್ ಕೆಲಸ ಮಾಡುವ ಅವರ ಮಗ ಅಶೋಕ ನಾಯ್ಕ ಈ ಬಗ್ಗೆ ಮಂಕಿ ಠಾಣೆಯ ಪೊಲೀಸರಿಗೆ ಮಾಹಿತಿ, ನೀಡಿ ಪ್ರಕರಣ ದಾಖಲಿಸಿದ್ದಾರೆ.