ಭಟ್ಕಳದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ 15 ಜನರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಮಾತ್ರ ಸಿಕ್ಕಿ ಬಿದ್ದಿದ್ದು, ಉಳಿದವರು ಕಾಡಿನಲ್ಲಿ ಓಡಿ ಪರಾರಿಯಾಗಿದ್ದಾರೆ.
ಭಟ್ಕಳದ ನೂಜ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೇ 30ರ ರಾತ್ರಿ 15 ಜನ ಅಂದರ್ ಬಾಹರ್ ಆಡುತ್ತಿದ್ದರು. ಭಟ್ಕಳ ಡಿವೈಎಸ್‌ಪಿ ಮಹೇಶ ಎಂ ಕೆ ಅವರಿಗೆ ಈ ಬಗ್ಗೆ ಮಾಹಿತಿ ಬಂದಿದ್ದು, ಅವರು ಸಿಪಿಐ ಮಂಜುನಾಥ ಲಿಂಗರೆಡ್ಡಿ ಹಾಗೂ ಪಿಎಸ್‌ಐ ಬರಮಪ್ಪ ಬೆಳಗಲಿ ಜೊತೆ ಕಾಡಿಗೆ ತೆರಳಿದರು. ಪೊಲೀಸ್ ಸಿಬ್ಬಂದಿ ಶಿವಾನಂದ್ಪ ವಡ್ಡರ್, ಶ್ರೀಪಾದ ನಾಯ್ಕ, ವೀರಣ್ಣ ಬಳ್ಳಾರಿ, ಮದಾರಸಾಬ ಚಕ್ಕೇರಿ, ಮಂಜುನಾಥ ನಾಯ್ಕ ಹಾಗೂ ವಾಹನ ಚಾಲಕ ಸಂತೋಷ ನಾಯ್ಕ ಅವರ ಜೊತೆಯಾದರು.
ಈ ಎಲ್ಲರೂ ಸೇರಿ ಹಣ ಕಟ್ಟಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಮುಗಿ ಬಿದ್ದರು. ಆಗ ಬೈಂದೂರಿನ ಬೋಟಿಯಲ್ಲಿ ಕೆಲಸ ಮಾಡುವ ಗೋಪಾಲ ಖಾರ್ವಿ ಸಿಕ್ಕಿ ಬಿದ್ದರು. ಅವರ ಜೊತೆ ಭಟ್ಕಳ ಉತ್ತರಕೊಪ್ಪ ಕೊಳಗೇರಿಯ ರೈಸ್ ಮಿಲ್ ಕಾರ್ಮಿಕ ನಾರಾಯಣ ನಾಯ್ಕ ಹಾಗೂ ರವೀಂದ್ರ ಸಿದ್ದಾಪುರದ ಜಬ್ಬಾರ ಸಾಬ್‌ರನ್ನು ಪೊಲೀಸರು ಹಿಡಿದರು. ಈ ದಾಳಿಯ ವೇಳೆ ಉಳಿದವರು ಕಾಡಿನ ಕಡೆ ದಿಕ್ಕಾಪಾಲಾಗಿ ಓಡಿದರು.
ಪೊಲೀಸರು ಉಳಿದವರ ಬೆನ್ನಟ್ಟಿದರೂ ಅವರು ಸಿಗಲಿಲ್ಲ. ಕೊನೆಗೆ ಮುರುಡೇಶ್ವರದ ಜಯಂತ ನಾಯ್ಕ, ಶಿರಾಲಿಯ ಬಾಬು ನಾಯ್ಕ, ಕೋಟೆಬಾಗಿಲಿನ ದತ್ತಾ ನಾಯ್ಕ, ಮುರುಡೇಶ್ವರದ ಇರ್ಫಾನ್, ಉತ್ತರಕೊಪ್ಪದ ಕುಮಾರ ಗೌಡ ಹಾಗೂ ಬೈಂದೂರಿನ ರಾಜೇಶ ಜೊತೆ ಮತ್ತೆ 6 ಜನ ಕಾಡಿನಲ್ಲಿ ಓಡಿ ಪರಾರಿಯಾದದನ್ನು ಪೊಲೀಸರು ಖಚಿತಪಡಿಸಿಕೊಂಡರು.
ಸಿಕ್ಕಿ ಬಿದ್ದವರ ಜೊತೆ ಓಡಿ ಹೋದವರ ಹೆಸರು-ವಿಳಾಸವನ್ನುಪಡೆದು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಇನ್ನೂ ಸಿಕ್ಕಿ ಬಿದ್ದವರ ಬಳಿಯಿದ್ದ 9700ರೂ ಹಣ ಹಾಗೂ 8075ರೂ ಸ್ವತ್ತುಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.