ಗಂಗಾವಳಿ ಸೇತುವೆ ಮೇಲೆ ಕಾರು ನಿಲ್ಲಿಸಿ ಪುಟ್ಟ ಮಗುವಿನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ದಂಪತಿಗೆ ಗೋಕರ್ಣ ಪೊಲೀಸರು ತುರ್ತು ಸಂದೇಶ ರವಾನಿಸಿದ್ದಾರೆ. ಆ ಮೂಲಕ ಕೊಂಚ ಆಯತಪ್ಪಿದರೂ ನದಿಗೆ ಬೀಳುವ ಸಾಧ್ಯತೆಯಿದ್ದ ಮಗುವನ್ನು ಪೊಲೀಸರು ಕಾಪಾಡಿದ್ದಾರೆ.
ಭಾನುವಾರ ಸಂಜೆ ಗೋಕರ್ಣದಿಂದ ಅಂಕೋಲಾ ಕಡೆ ದಂಪತಿ ಕಾರಿನಲ್ಲಿ ಸಂಚರಿಸಿದ್ದಾರೆ. ಗಂಗಾವಳಿ- ಮಂಜುಗುಣಿ ಸಂಪರ್ಕ ಕಲ್ಪಿಸುವ ಗಂಗಾವಳಿ ಸೇತುವೆಯ ಮೇಲೆ ಅವರು ತಮ್ಮ ಕಾರು ನಿಲ್ಲಿಸಿದ್ದಾರೆ. ಅದಾದ ನಂತರ ಕೆಲ ದೂರದವರೆಗೆ ನಡೆದು ಬಂದಿದ್ದು, ನದಿ ಬಳಿ ಅಪಾಯಕಾರಿ ರೀತಿ ಮಗುವನ್ನು ಹಿಡಿದು ಫೋಟೋ ತೆಗೆಸಿಕೊಂಡಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯ ಸಿಸಿ ಟಿವಿಯಲ್ಲಿ ಈ ದೃಶ್ಯವಾಗಳಿಗಳು ಕಾಣಿಸಿದೆ. ಇದನ್ನು ಗಮನಿಸಿದ ಸಿಪಿಐ ಶ್ರೀಧರ್ ಅವರು ಕ್ಯಾಮರಾ ಮೂಲಕವೇ ತುರ್ತು ಸಂದೇಶ ರವಾನಿಸಿದ್ದಾರೆ.
`ಪ್ರವಾಸಿರೇ ಇಲ್ಲಿ ಗಮನಿಸಿ. ನೀವು ಗೋಕರ್ಣದ ಗಂಗಾವಳಿ ನದಿ ಸೇತುವೆ ಮೇಲೆ ನಿಂತಿದ್ದು, ನದಿ ರಭಸವಾಗಿ ಹರಿಯುತ್ತಿದೆ. ಇದು ಅಪಾಯಕಾರಿಯಾಗಿದೆ. ನಿಮ್ಮ ಮಗುವನ್ನು ದಯವಿಟ್ಟು ಸುರಕ್ಷಿತವಾಗಿರಿಸಿಕೊಳ್ಳಿ’ ಎಂಬ ಧ್ವನಿ ಅಲ್ಲಿ ಅಳವಡಿಸಿದ್ದ ಕ್ಯಾಮರಾ ಮೂಲಕ ಆ ದಂಪತಿಗೆ ಕೇಳಿಸಿದೆ. ತಕ್ಷಣ ಮಗುವನ್ನು ಇನ್ನಷ್ಟು ಗಟ್ಟಿಯಾಗಿ ತಂಬಿಕೊoಡು ಅವರು ಅಲ್ಲಿಂದ ತೆರಳಿದ್ದಾರೆ. ಈ ವೇಳೆ ಪೊಲೀಸರು ಕ್ಯಾಮರಾ ಮೂಲಕ ಜೋರಾಗಿ ಸೈರನ್ ಸಹ ಮೊಳಗಿಸಿ ಎಚ್ಚರಿಕೆ ನೀಡಿದ್ದಾರೆ.
ಗೋಕರ್ಣದಲ್ಲಿ ಈಚೆಗೆ ಪೊಲೀಸ್ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಅದರ ಅನುಕೂಲಕ್ಕಾಗಿ ಎಲ್ಲಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, 5ಕಿಮೀ ದೂರದ ಗಂಗಾವಳಿ ಸೇತುವೆಯ ದೃಶ್ಯಾವಳಿಗಳು ನೇರವಾಗಿ ಠಾಣೆಯಲ್ಲಿ ಕಾಣುತ್ತಿದೆ.