ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜೊಯಿಡಾದ ದೂದ್ ಸಾಗರ್ ಜಲಪಾತಕ್ಕೆ ತೆರಳಬೇಕಿದ್ದ ಪ್ರವಾಸಿಗರು ಗೋವಾ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಅರಣ್ಯ ಸಿಬ್ಬಂದಿ ಆಸ್ಪತ್ರೆ ಸೇರಿದ್ದಾರೆ. ಅದಾದ ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸರು ಕಾಡು ಪೂರ್ತಿ ಸುತ್ತಾಟ ನಡೆಸಿ ದಾಳಿ ನಡೆಸಿದವರನ್ನು ವಶಕ್ಕೆಪಡೆದಿದ್ದಾರೆ.
ಪ್ರಸಿದ್ಧ ದೂದ್ ಸಾಗರ್ ಜಲಪಾತಕ್ಕೆ ಇದೀಗ ಪ್ರವೇಶ ನಿಷಿದ್ಧ. ಅದಾಗಿಯೂ ಆ ಮಾರ್ಗದ ರೈಲು ಏರಿ ಬರುವ ಪ್ರವಾಸಿಗರು ಕಾಡಿನಲ್ಲಿ ಇಳಿಯುತ್ತಾರೆ. ಅಲ್ಲಿಂದ ನಡೆದು ದೂದ್ ಸಾಗರ್ ಜಲಪಾತಕ್ಕೆ ತೆರಳುತ್ತಾರೆ. ಕಾಡಿನಲ್ಲಿ ದಾರಿ ತಪ್ಪುವ ಸಾಧ್ಯತೆ ಹಾಗೂ ಇನ್ನಿತರ ಅಪಾಯಗಳಿದ್ದರೂ ಪ್ರವಾಸಿಗರು ಕದ್ದು-ಮುಚ್ಚಿ ಜಲಪಾತ ವೀಕ್ಷಣೆಗೆ ಹೋಗುತ್ತಿದ್ದಾರೆ.
ಕಳೆದ ಗುರುವಾರ ಹುಬ್ಬಳ್ಳಿಯ ಶ್ರವಣ ಕರಡಿಗುಡ್ಡ ಹಾಗೂ ಹಳಿಯಾಳದ ಮಹಾದೇವಪ್ಪ ಮಾಲ್ಗುಂಡಿ ಎಂಬಾತರು ತಮ್ಮ ಇನ್ನಿಬ್ಬರು ಸ್ನೇಹಿತರ ಜೊತೆ ಗೋವಾಗೆ ಹೋಗಿದ್ದರು. ಅಲ್ಲಿಂದ ಮುಂದೆ ದೂದ್ ಸಾಗರ್ ಮಾರ್ಗವಾಗಿ ಸಂಚರಿಸುವ ರೈಲು ಏರಿದ್ದರು. ದೂದ್ ಸಾಗರ್ ಜಲಪಾತಕ್ಕಿಂದ ಹಿಂದೆ ಅವರು ರೈಲಿನಿಂದ ಇಳಿದಿದ್ದು, ಕಾಡು ಸುತ್ತುವ ಕೆಲಸ ಶುರು ಮಾಡಿದ್ದರು. ಜಲಪಾತದ ದಾರಿ ಹುಡುಕಿ ಹೊರಟ ಅವರು ವನ್ಯಜೀವಿ ಅಭಯಾರಣ್ಯ ಪ್ರವೇಶಿಸಿದ್ದರು.
ಅಕ್ರಮವಾಗಿ ಅಭಯಾರಾಣ್ಯ ಪ್ರವೇಶಿಸಿರುವುದನ್ನು ಗೋವಾದ ಅರಣ್ಯ ಸಿಬ್ಬಂದಿ ಗಮನಿಸಿದರು. ಕೂಡಲೇ ಅಲ್ಲಿಗೆ ಧಾವಿಸಿದ ಗೋವಾ ಅರಣ್ಯ ಸಿಬ್ಬಂದಿ ಮಂಗಲದಾಸ ಗಾಂವ್ಕರ ಹಾಗೂ ನಾಗು ದೋಯಿಪಡೆ ಆ ನಾಲ್ವರು ಪ್ರವಾಸಿಗರನ್ನು ತಡೆದರು. ಮುಂದೆ ಹೋಗದಂತೆ ಎಚ್ಚರಿಸಿದರು. ಅದಾಗಿಯೂ ಆ ನಾಲ್ವರು ಅರಣ್ಯ ಸಿಬ್ಬಂದಿ ಜೊತೆ ಜಗಳವಾಡಿದರು. ಶ್ರವಣ ಕರಡಿಗುಡ್ಡ ಹಾಗೂ ಮಹಾದೇವಪ್ಪ ಮಾಲ್ಗುಂಡಿ ಸೇರಿ ಅರಣ್ಯ ಸಿಬ್ಬಂದಿಯನ್ನು ಥಳಿಸಿದರು. ಪ್ರವಾಸಿಗರು ತಮ್ಮ ಬಳಿಯಿದ್ದ ಹರಿತವಾದ ಆಯುಧಗಳಿಂದಲು ತಿವಿದರು.
ಪರಿಣಾಮ ಆ ಇಬ್ಬರು ಅರಣ್ಯ ಸಿಬ್ಬಂದಿ ಗಾಯಗೊಂಡಿದ್ದು, ಅವರು ಗೋವಾದ ಆಸ್ಪತ್ರೆ ಸೇರಿದರು. ಈ ವಿಷಯ ಅರಿತ ಪೊಲೀಸರು ಅರಣ್ಯ ಸಿಬ್ಬಂದಿ ನೆರವು ಪಡೆದು ಕಾಡಿನಲ್ಲಿ ಕಾರ್ಯಾಚರಣೆ ನಡೆಸಿದರು. ಅಲ್ಲಿ ಅವಿತುಕೊಂಡಿದ್ದ ಪ್ರವಾಸಿ ದುಷ್ಕರ್ಮಿಗಳನ್ನು ವಶಕ್ಕೆಪಡೆದರು. ಸದ್ಯ ಗೋವಾ ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.