ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡು ಪಶ್ಚಿಮಘಟ್ಟ ಪ್ರದೇಶದಲ್ಲಿ ಪದೇ ಪದೇ ಭೂ ಕುಸಿತ ಆಗುತ್ತಿರುವ ಹಿನ್ನಲೆ ಪಶ್ಚಿಮಘಟ್ಟದ ಧಾರಣಾ ಶಕ್ತಿಯ ಕುರಿತು ಅಧ್ಯಯನ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. `ಮುಂದಿನ ಮೂರು ತಿಂಗಳ ಒಳಗೆ ಅಧ್ಯಯನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಅವರು ಸೂಚಿಸಿದ್ದಾರೆ.
ಈಚೆಗೆ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಸಾಕಷ್ಟು ಕಡೆ ಅವಾಂತರ ಸೃಷ್ಠಿಯಾಗಿದೆ. ಭೌಗೋಳಿಕ ಪ್ರದೇಶಕ್ಕೆ ಆತಂಕ ಉಂಟಾದ ಉದಾಹರಣೆಗಳು ಸಾಕಷ್ಟಿವೆ. ಈ ಹಿನ್ನಲೆ ಅರಣ್ಯ – ಜೀವಿಶಾಸ್ತç ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವರು ಪತ್ರ ಬರೆದಿದ್ದಾರೆ. `ಕರ್ನಾಟಕದ ಅರಣ್ಯಗಳಲ್ಲಿ ಶೇ 60ರಷ್ಟು ಜೀವ ವೈವಿಧ್ಯತೆಯ ತಾಣ ಪಶ್ಚಿಮಘಟ್ಟ ಪ್ರದೇಶದಲ್ಲಿದೆ. ಇಲ್ಲಿನ ಸಸ್ಯ ಸಂಕುಲನ, ವನ್ಯಜೀವಿ ಮುಂತಾದವುಗಳಿಗೆ ಸಾಕಷ್ಟು ಮಹತ್ವವಿದೆ. ದೇಶದ ತೇವಾಂಶಕ್ಕು ಈ ಪ್ರದೇಶ ಮಹತ್ವದ ಪಾತ್ರ ವಹಿಸುತ್ತದೆ’ ಎಂಬ ವಿಷಯವನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
`ಪಶ್ಚಿಮ ಘಟ್ಟ ಪ್ರದೇಶದಲ್ಲಿ ರಸ್ತೆ, ಅರಣ್ಯೇತರ ಚಟುವಟಿಕೆ ಮುಂತಾದ ಕಾರ್ಯದಿಂದ ಭೂ ಕುಸಿತ ಸಾಕಷ್ಟು ಪ್ರಮಾಣದಲ್ಲಿ ಉಂಟಾಗುತ್ತಿದೆ. ಪಶ್ಚಿಮಘಟ್ಟದ ಪರಿಸರದ ಮೇಲೆ ಗಂಭೀರ ಪ್ರಮಾಣದಲ್ಲಿ ಪರಿಣಾಮ ಬೀರುವುದರಿಂದ ಇಂದಿನ ಸ್ಥಿತಿಯಲ್ಲಿರುವ ಪಶ್ಚಿಮ ಘಟ್ಟದ ಸಾಮಥ್ಯವನ್ನ ಅಧ್ಯಯನವನ್ನ ಜರುಗಿಸುವದು ಅನಿವಾರ್ಯ’ ಎಂದು ಅವರು ಬರೆದಿದ್ದಾರೆ.
ಜಲಜೀವ ತಜ್ಞರ ಕೊರತೆ:
`ಪಶ್ಚಿಮ ಘಟ್ಟದ ಜೀವ ವ್ಯವಿಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಅರಣ್ಯ ಇಲಾಖೆಯಲ್ಲಿ ತಜ್ಞರಿಲ್ಲ. ಪೂರ್ಣ ಪ್ರಮಾಣದ ತಜ್ಞರು ಹಾಗೂ ವಿಜ್ಞಾನಿಗಳ ಕೊರತೆಯಿಂದ ಈ ಅಧ್ಯಯನ ಮತ್ತು ವರದಿ ಯಾಂತ್ರಿಕ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿರಬಾರದು’ ಎಂದು ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.