ಕಾನ್ಸರ್ ಸೇರಿ ಹಲವು ರೋಗಗಳಿಗೆ ಕಾರಣವಾಗಬಹುದಾದ ಗಾಂಜಾ ವ್ಯಸನಿಗಳ ಬಾಯಿಂದ ಗಬ್ಬು ವಾಸನೆ ಬರುತ್ತಿದ್ದು, ಆ ವಾಸನೆ ಆಧಾರದಲ್ಲಿಯೇ ಪೊಲೀಸರು ಇದೀಗ ವ್ಯಸನಿಗಳನ್ನು ಗುರುತಿಸುತ್ತಿದ್ದಾರೆ. ಒಂದೇ ದಿನ ಭಟ್ಕಳ ಪೊಲೀಸರು ಐದು ಗಾಂಜಾ ವ್ಯಸನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಸಿಕ್ಕಿಬಿದ್ದ ಎಲ್ಲರೂ 24 ವರ್ಷ ಒಳಗಿನವರು!
ಭಟ್ಕಳದ ಹೆಬಳೆ ಬಳಿಯ ಹೆರ್ತಾರ್ ಗ್ರಾಮದ ಕಿರಣ ಗೋಪಾಲ ಮೊಗೇರ್ (21) ವರು ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಮೇ 31ರಂದು ಅವರು ಜಾಲಿ ದೇವಿನಗರ ಬಳಿಯ ಪ್ರಥಮ ದರ್ಜೆ ಕಾಲೇಜು ಬಳಿ ಗಾಂಜಾ ಸೇವಿಸಿ ಅಲೆದಾಡುತ್ತಿದ್ದರು. ಅವರ ಬಾಯಿಂದ ಬಂದ ಕೆಟ್ಟ ವಾಸನೆ ಆಧರಿಸಿ ಪಿಎಸ್‌ಐ ಶಾಂತಿನಾತ ಪಾಸಾನೆ ಅವರು ವಿಚಾರಣೆಗೆ ಒಳಪಡಿಸಿದರು. ಕಿರಣ ಮೊಗೇರ್ ಅವರು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದು, ಅದಾಗಿಯೂ ಪೊಲೀಸರು ಅವರ ಅರೋಗ್ಯ ತಪಾಸಣೆ ನಡೆಸಿದರು. ಆಗ ಗಾಂಜಾ ಸೇವನೆ ದೃಢವಾದ ಕಾರಣ ಪ್ರಕರಣ ದಾಖಲಿಸಿದರು.
ಭಟ್ಕಳ ಹೆಬಳೆಯ ಹೆರ್ತಾರ್ ದೇವುಮನೆಯ ಚೇತನ ಮೊಗೇರ್ (23) ಸಹ ಮೀನುಗಾರಿಕೆ ಬಿಟ್ಟು ಗಾಂಜಾ ವ್ಯಸನದಲ್ಲಿ ತೊಡಗಿದ್ದರು. ದೇವಿನಗರ ಕರಿಕಲ್ ರಸ್ತೆಯಲ್ಲಿ ಅಲೆದಾಡುತ್ತಿದ್ದ ಅವರನ್ನು ಪಿಎಸ್‌ಐ ನವೀನ ನಾಯ್ಕ ವಿಚಾರಿಸಿದರು. ಚೇತನ್ ಮೊಗೇರ್ ಅವರ ಬಾಯಿ ಸಹ ಕೆಟ್ಟ ವಾಸನೆ ಬರುತ್ತಿದ್ದು, ಅವರು ಅಲ್ಲಿಯೇ ಗಾಂಜಾ ಸೇವಿಸಿದನ್ನು ಒಪ್ಪಿಕೊಂಡರು. ವೈದ್ಯಕೀಯ ಪರೀಕ್ಷೆಯಲ್ಲಿ ಸಹ ಗಾಂಜಾ ಸೇವಿಸಿರುವುದು ದೃಢವಾಗಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿದರು.
ಅದೇ ದೇವುಮನೆಯ ಕಾರ್ತಿಕ ಮೊಗೇರ್ (24) ಸಹ ಅದೇ ದಿನ ಗಾಂಜಾ ಸೇವಿಸಿ ಪಿಎಸ್‌ಐ ಸೋಮರಾಜ ರಾಥೋಡ್ ಅವರ ಬಳಿ ಸಿಕ್ಕಿ ಬಿದ್ದರು. ದೇವಿನಗರದ ಪ್ರಥಮ ದರ್ಜೆ ಕಾಲೇಜಿನ ಬಳಿ ಗಾಂಜಾ ಸೇವಿಸಿದ್ದ ಕಾರ್ತಿಕ್ ಮೊಗೇರ್ ಅವರ ಬಳಿ ಗಬ್ಬು ವಾಸನೆ ಬರುತ್ತಿದ್ದು, ಪೊಲೀಸರು ಅವರ ಮೇಲೆ ದಾಳಿ ನಡೆಸಿದರು. ವೈದ್ಯರು ಸಹ ಕಾರ್ತಿಕ್ ಮೊಗೇರ್ ಗಾಂಜಾ ವ್ಯಸನಿ ಎಂದು ಪ್ರಮಾಣ ಪತ್ರ ನೀಡಿದರು. ಈ ಹಿನ್ನಲೆ ಕಾರ್ತಿಕ್ ಮೊಗೇರ್ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದರು.
ಭಟ್ಕಳ ಹೆಬಳೆ ಬಳಿಯ ಬೈದರಮನೆಯ ಪುನೀತ ಮೊಗೇರ್ (22) ಅವರು ಮೀನುಗಾರಿಕೆ ನಂಬಿ ಬದುಕಿದ್ದರು. ಮೀನುಗಾರಿಕೆ ಇಲ್ಲದ ಕಾರಣ ವ್ಯಸನದ ಹಾದಿ ಹಿಡಿದಿದ್ದರು. ಪ್ರಥಮ ದರ್ಜೆ ಕಾಲೇಜಿನ ಬಳಿ ಅಲೆದಾಡುತ್ತಿದ್ದ ಅವರ ಬಾಯಿ ವಾಸನೆ ನೋಡಿದ ಪೊಲೀಸರಿಗೆ ಮಾದಕ ವ್ಯಸನದ ಅನುಮಾನ ಮೂಡಿತು. ಈ ಹಿನ್ನಲೆ ಪುನೀತ ಮೊಗೇರ್ ಅವರನ್ನು ತಪಾಸಣೆಗೆ ಒಳಪಡಿಸಿದರು. ವೈದ್ಯರು ಪುನೀತ ಮೊಗೇರ್ ಸಹ ಗಾಂಜಾ ವ್ಯಸನದಿಂದ ಹೊರತಾಗಿಲ್ಲ ಎಂದು ಖಚಿತಪಡಿಸಿದರು. ಈ ಹಿನ್ನಲೆ ಪಿಎಸ್‌ಐ ನವೀನ ನಾಯ್ಕ ಅವರು ಪುನೀತ ಮೊಗೇರ್ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಹೆಬಳೆಯ ಹರ್ತಾರಿನ ಕಿರಣ ಲಂಬೋದರ ಮೊಗೇರ್ ಎಂಬಾತರು ಗಾಂಜಾ ಸೇವಿಸಿರುವುದನ್ನು ಅವರ ಬಾಯಿ ವಾಸನೆ ಮೂಲಕ ಪಿಎಸ್‌ಐ ತಿಮ್ಮಪ್ಪ ಎಸ್ ಅವರು ಕಂಡು ಹಿಡಿದಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.