ಕೊರೊನಾ ಕಾಯಿಲೆಯಿಂದ ಬಳಲುತ್ತಿದ್ದ ಯಲ್ಲಾಪುರದ ಯುವಕ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು, ಆತ ಕಾರು ಚಲಾಯಿಸಿಕೊಂಡು ಉತ್ತರ ಪ್ರದೇಶಕ್ಕೆ ಹೋದ ಮಾಹಿತಿ ಸಿಕ್ಕಿದೆ.
ಈಚೆಗೆ ಯಲ್ಲಾಪುರ ಆಸ್ಪತ್ರೆಯಲ್ಲಿ ಎಂಟು ರೋಗಿಗಳಿಗೆ ಕೊರೊನಾ ತಪಾಸಣೆ ನಡೆಸಲಾಗಿತ್ತು. ಆ ಎಂಟು ಜನರ ಗಂಟಲದೃವದ ಮಾದರಿ ಪರೀಕ್ಷೆಗೆ ಕಳುಹಿಸಿದಾಗ ಇಬ್ಬರಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಅದರಲ್ಲಿ ಒಬ್ಬರು 27 ವರ್ಷದ ಚಾಲಕರಾಗಿದ್ದು, ಇನ್ನೊಬ್ಬರು ಗರ್ಭಿಣಿಯಾಗಿದ್ದರು. ಕೊರೊನಾ ಸೋಂಕಿತ ಚಾಲಕ ಯಲ್ಲಾಪುರದ ನೂತನ ನಗರ (ಜಡ್ಡಿ) ಮೂಲದವರು. ಗರ್ಭಿಣಿ ಕಿರವತ್ತಿ ಭಾಗದವರು. ಅವರಿಬ್ಬರಿಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದರು.
ಈ ನಡುವೆ ಚಾಲಕ ವೃತ್ತಿ ಮಾಡಿಕೊಂಡಿದ್ದ ಯುವಕನಿಗೆ ಮೊನ್ನೆ ಫೋನ್ ಬಂದಿದ್ದು, ಅದಾದ ನಂತರ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಚಿಕಿತ್ಸೆಯಲ್ಲಿದ್ದ ಯುವಕ ಗುಣಮುಖವಾಗುವ ಮುನ್ನವೇ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಸಾಕಷ್ಟು ಹುಡುಕಾಟ ನಡೆಸಿದರೂ ಆತನ ಸುಳಿವು ಸಿಕ್ಕಿಲ್ಲ. ಕುಟುಂಬದವರನ್ನು ವಿಚಾರಿಸಿದಾಗ ಆತ ಉತ್ತರ ಪ್ರದೇಶಕ್ಕೆ ಹೋದ ಬಗ್ಗೆ ಮಾಹಿತಿ ಸಿಕ್ಕಿದೆ.
ಕಾರು ಬಾಡಿಗೆಗಾಗಿ ಆತ ಉತ್ತರ ಪ್ರದೇಶಕ್ಕೆ ತೆರಳಿದ್ದು, ಆತನ ಸಂಪರ್ಕಕ್ಕೆ ಬಂದ ಕುಟುಂಬದವರ ಆರೋಗ್ಯದ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಕಾರು ಚಾಲಕನ ಮೊಬೈಲ್ ಈವರೆಗೂ ಸ್ವಿಚ್ ಆನ್ ಆಗಿಲ್ಲ.