ಹವಾಮಾನ ವೈಪರಿತ್ಯದಿಂದಾಗಿ ಕಡಲತೀರಗಳು ಅಪಾಯ ಸೃಷ್ಠಿಸುತ್ತಿದ್ದು, ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರು ಈ ಸೂಚನೆಗೆ ಖ್ಯಾರೇ ಎನ್ನುತ್ತಿಲ್ಲ!
ರಜಾ ದಿನಗಳಲ್ಲಿ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ಹೆಚ್ಚಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅನೇಕರು ದೇವರ ದರ್ಶನ ಮಾಡಿದ ನಂತರ ಸಮುದ್ರದ ಕಡೆ ವಿಹರಿಸಲು ತೆರಳುತ್ತಾರೆ. ಅದರಲ್ಲಿ ಹಲವರು ಅಪಾಯದ ಸೂಚನೆಯನ್ನು ಮೀರಿ ಕಡಲಿಗೆ ಇಳಿಯುತ್ತಿದ್ದಾರೆ. ಕಡಲತೀರದಲ್ಲಿ ಕಾವಲಿಗಿರುವ ಭದ್ರತಾ ಸಿಬ್ಬಂದಿಯ ಮಾತನ್ನು ಧಿಕ್ಕರಿಸಿ ನೀರಿಗಿಳಿದು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಗೋಕರ್ಣ ಹಾಗೂ ಮುರುಡೇಶ್ವರ ಕಡಲ ತೀರದಲ್ಲಿ ಜೀವಹಾನಿ ಪ್ರಕರಣಗಳ ಸಂಖ್ಯೆ ಈಚೆಗೆ ಹೆಚ್ಚಾಗಿದೆ. ಕಡಲಿನಲ್ಲಿ ಸೆಳೆತ ಜೋರಾಗಿರುವ ಕಾರಣ ಜಿಲ್ಲಾಡಳಿತ ನೀರಿಗೆ ಇಳಿಯದಂತೆ ನಾಮಫಲಕಗಳನ್ನು ಅಳವಡಿಸಿದೆ. ಜೊತೆಗೆ ನೀರಿಗೆ ಇಳಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಆದರೆ, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಆ ಎಚ್ಚರಿಕೆಯ ಫಲಕವನ್ನು ಓದುವಷ್ಟು ತಾಳ್ಮೆಯಿಲ್ಲ. ಹೇಳಿದವರ ಮಾತಿಗೂ ಅವರು ಬೆಲೆ ಕೊಡುತ್ತಿಲ್ಲ.
ಸಮುದ್ರದಲ್ಲಿನ ವಾತಾವರಣ ಸರಿಯಿಲ್ಲದ ಕಾರಣ ಮೀನುಗಾರರಿಗೆ ಸಹ ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಸ್ಥಳೀಯ ಮೀನುಗಾರರು ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಈ ಮೂರು ತಿಂಗಳು ಮೀನು ಸಂತನೋತ್ಪತಿ ಕಾಲವಾಗಿದ್ದು, ಭವಿಷ್ಯದ ಮೀನುಗಾರಿಕೆಕಾಗಿ ಮೀನುಗಾರರು ಮೊದಲಿನಿಂದಲೂ ಮಳೆಗಾಲದ ಅವಧಿಯಲ್ಲಿ ಸಮುದ್ರಕ್ಕೆ ಹೋಗುತ್ತಿಲ್ಲ. ಆದರೆ, ಬೇರೆ ಬೇರೆ ಭಾಗದಿಂದ ಬರುವ ಪ್ರವಾಸಿಗರಿಗೆ ಸ್ಥಳೀಯರು ಎಷ್ಟೇ ಹೇಳಿದರೂ ಅದು ಕೇಳಿಸುತ್ತಿಲ್ಲ.
ಅದರಲ್ಲಿಯೂ ಶನಿವಾರ-ಭಾನುವಾರ ಬಂತೆದoತೆ ಪೊಲೀಸರ ಜೊತೆ ಲೈಪ್‌ಗಾರ್ಡ ಸಿಬ್ಬಂದಿ ಸಹ ಪ್ರವಾಸಿಗರನ್ನು ನಿಯಂತ್ರಿಸಲು ಹರಸಾಹಸಪಡುತ್ತಿದ್ದಾರೆ. ಸದ್ಯ ಪ್ರವಾಸಿಗರು ನೀರಿಗೆ ಇಳಿಯದಂತೆ ತಡೆಯಲು ಮುರುಡೇಶ್ವರದಲ್ಲಿ ಪೊಲೀಸರು ಸಮುದ್ರಕ್ಕೆ ತೆರಳುವ ಮಾರ್ಗವನ್ನು ಬಂದ್ ಮಾಡಿದ್ದಾರೆ. ಅದಾಗಿಯೂ ಕೆಲವರು ಕದ್ದು ಮುಚ್ಚಿ ಕಡಲು ಪ್ರವೇಶ ಮಾಡುತ್ತಿದ್ದಾರೆ.