ಅಂಕೋಲಾ ಕಡಲತೀರಕ್ಕೆ ಆಗಮಿಸಿದ್ದ ಅಂಗವಿಕಲ ಆಮೆಯನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆ ಆಮೆಗೆ ಆರೈಕೆ ಮಾಡಿದ್ದಾರೆ. ಆ ಆಮೆಯನ್ನು ಗುಣಪಡಿಸುವುದಕ್ಕಾಗಿ ಇದೀಗ ಕುಂದಾಪುರಕ್ಕೆ ಕಳುಹಿಸಲಾಗಿದೆ.
ಅಂಕೋಲಾದ ಬೆಲಿಕೇರಿ ಕಡಲತೀರದಲ್ಲಿ ಎರಡು ಮೂರು ದಿನಗಳಿಂದ ಆಮೆಯೊಂದು ಓಡಾಡುತ್ತಿತ್ತು. ಆ ಆಮೆಗೆ ಸಮುದ್ರದಲ್ಲಿ ಈಜಲು ಆಗುತ್ತಿರಲಿಲ್ಲ. ಕಾರಣ ಆಮೆಯ ಕಾಲುಗಳು ಸರಿಯಾಗಿರಲಿಲ್ಲ. ಹೀಗಾಗಿ ಎಲ್ಲಾ ಆಮೆಗಳು ಆಳ ಸಮುದ್ರ ತಲುಪಿದರೂ ಈ ಆಮೆ ಬಳಿ ಅದು ಸಾಧ್ಯವಾಗಿರಲಿಲ್ಲ.
ಅಲ್ಲಿನ ಮೀನುಗಾರರಾದ ಸತೀಶ, ಗೌರೀಶ ಹಾಗೂ ನಾಗೇಂದ್ರ ಅವರು ಆಮೆಯ ಬಗ್ಗೆ ವಿಲಾಸ ನಾಯಕ ಅವರಿಗೆ ಮಾಹಿತಿ ನೀಡಿದರು. ವಿಲಾಸ ನಾಯಕ ಅವರು ಆಮೆಯ ಶೋಚನಿಯ ಸ್ಥಿತಿಯ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ಕಡಲ ಆಮೆ ರಕ್ಷಣೆಗಾಗಿ ಶ್ರಮಿಸುವ ಅರಣ್ಯ ಇಲಾಖೆ ಸಿಬ್ಬಂದಿ ಸಮುದ್ರ ತೀರಕ್ಕೆ ಆಗಮಿಸಿದರು. ಆಮೆಯ ಸ್ಥಿತಿ ನೋಡಿ ಮರುಗಿದ ಅವರು ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು.
ಕಡಲ ಆಮೆಯ ಮೊಟ್ಟೆ ಸಂರಕ್ಷಿಸಿ ಮರಿ ಮಾಡಿ ಸಮುದ್ರಕ್ಕೆ ಬಿಟ್ಟ ಅನುಭವಹೊಂದಿದ ಆ ಸಿಬ್ಬಂದಿ ಆಗಮಿಸಿ, ಆಮೆಯ ಚಿಕಿತ್ಸೆ ಶುರು ಮಾಡಿದರು. ಸಮುದ್ರದಲ್ಲಿ ಈಜಲಾಗದೇ ಒದ್ದಾಡುತ್ತಿದ್ದ ಆಮೆಯ ಮುಂಗಾಲು ಬೆಳವಣಿಗೆ ಆಗದಿರುವುದನ್ನು ಗಮನಿಸಿದರು. ಆ ಆಮೆಗೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ಸಾಗಿಸಿದ್ದು, ಅಲ್ಲಿ ತಜ್ಞರು ಆಮೆಯ ಮೇಲೆ ವಿಶೇಷ ನಿಗಾವಿಡಲಿದ್ದಾರೆ.
ಕಡಲ ಆಮೆಗಳು ಮೊಟ್ಟೆಯಿಡುವುದಕ್ಕಾಗಿ ಸಮುದ್ರ ದಡೆಗೆ ಬರುತ್ತಿದ್ದು, ಆಮೆ ಮೊಟ್ಟೆಯನ್ನು ನಾಯಿಯಿಂದ ರಕ್ಷಿಸುವಲ್ಲಿ ಅರಣ್ಯ ಇಲಾಖೆ ಪ್ರಮುಖ ಪಾತ್ರ ನಿಭಾಯಿಸುತ್ತಿದೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಕಡಲ ಆಮೆಯನ್ನು ರಕ್ಷಿಸಿ ಕಡಲಿಗೆ ಬಿಡುತ್ತಿದೆ. ಕಡಲಿನಲ್ಲಿ ಆಮೆ ಮೊಟ್ಟೆಯಿಟ್ಟಿರುವ ಸುದ್ದಿ ಮುಟ್ಟಿಸಿದವರಿಗೂ ಅರಣ್ಯ ಇಲಾಖೆ ಸಾವಿರ ರೂ ಬಹುಮಾನ ನೀಡುತ್ತಿದೆ.