ಹೊಸ ವಿಚಾರ, ದೂರದೃಷ್ಠಿ ಹಾಗೂ ಪರಿಪೂರ್ಣ ವ್ಯಕ್ತಿತ್ವದ ಮೂಲಕ ಶಿರಸಿಯ ಎಂ ಇ ಎಸ್ ಕಲಾ ಮತ್ತು ವಿಜ್ಞಾನ ವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸಿದ್ದ ಎಸ್ ಆಯ್ ಭಟ್ಟ ಅವರು ಈ ದಿನ ನಮ್ಮನ್ನು ಅಗಲಿದ್ದಾರೆ.
34 ವರ್ಷಗಳ ಕಾಲ ಎಂ ಇ ಎಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಎಸ್ ಆಯ್ ಭಟ್ಟ ಅವರು 2010ರ ಆಸುಪಾಸಿನ ಅವಧಿಯಲ್ಲಿ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಆ ಅವಧಿಯಲ್ಲಿಯೇ ಕಾಲೇಜು ಆವರಣದ ತುಂಬ ಸಿಸಿ ಕ್ಯಾಮರಾ, 18 ವಿಭಾಗಗಳ ಸಂವಹನಕ್ಕಾಗಿ ಆಂತರಿಕ ಫೋನ್ ವ್ಯವಸ್ಥೆ ಸೇರಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಆಪ್ತ ಸಮಾಲೋಚನೆ ಬಗ್ಗೆ ಕಾಳಜಿವಹಿಸಿದ್ದ ಎಸ್ ಆಯ್ ಭಟ್ಟ ಅವರು ಅವರು ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಗಳ ವೈಯಕ್ತಿಕ ಬದುಕಿನ ಶ್ರೇಯೋಭಿವೃದ್ಧಿ ಬಗ್ಗೆ ಚಿಂತಿಸುತ್ತಿದ್ದರು.
ಉತ್ತಮ ವಾಗ್ಮಿಯಾಗಿದ್ದ ಎಸ್ ಐ ಭಟ್ಟ ಅವರು ತಮ್ಮ ಆಡಳಿತ ನೈಪುಣ್ಯತೆ, ಕೌಶಲ್ಯ ಚಾಕಚಕ್ಯತೆಯನ್ನು ಏಳು ವರ್ಷ ಅವಧಿಯ ಪ್ರಾಚಾರ್ಯ ಹುದ್ದೆಯಲ್ಲಿದ್ದಾಗ ತೋರಿಸಿದರು. ಮಕ್ಕಳ ಜೊತೆ ಮಗುವಿನ ಹಾಗೆ ಬೆರೆಯುತ್ತಿದ್ದ ಅವರು ಇಡೀ ಕಾಲೇಜಿನ ವಾತಾವರಣವನ್ನು ತಮ್ಮ ಕಣ್ಣ ನೋಟದಲ್ಲಿ ಹಿಡಿದಿಟ್ಟುಕೊಂಡಿದ್ದರು. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆಪಡೆದು ಯೋಜನೆ ರೂಪಿಸುವುದು, ಹೊಸತನದ ದಾರಿ ಹುಡುಕುವುದು ಹಾಗೂ ತಾವು ರೂಪಿಸಿದ್ದ ಯೋಜನೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಎಸ್ ಆಯ್ ಭಟ್ಟ ಅವರು ಪರಿಣಿತರಾಗಿದ್ದರು. ಮುಂದಿನ 15-20 ವರ್ಷಗಳ ಬದಲಾವಣೆ ಹಾಗೂ ಯೋಜನೆಯ ಬಗ್ಗೆ ಮೊದಲೇ ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದರು.
2011ರಲ್ಲಿ ಎಂಇಎಸ್ ಕಾಲೇಜಿನಿಂದ ನಿವೃತ್ತರಾದ ಅವರು ಕೆಲ ಕಾಲ ಹೊನ್ನಾವರದ ಕಾಲೇಜುವೊಂದಕ್ಕೆ ತೆರಳಿ ಪಾಠ ಮಾಡಿದರು. ನಿವೃತ್ತಿ ನಂತರ ಎಂಇಎಸ್ ಕಾಲೇಜಿನ ಸಂಪರ್ಕ ಕಡಿಮೆ ಆಗಿದ್ದರೂ ತಮ್ಮೊಂದಿಗೆ ಬೆರೆತ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಅವರು ಮರೆತಿರಲಿಲ್ಲ. 20 ವರ್ಷಗಳ ಕಾಲ ಎನ್‌ಸಿಸಿ ಅಧಿಕಾರಿಯಾಗಿ ಹಾಗೂ ಅದರಲ್ಲಿಯೂ ಮೇಜರ್ ಹುದ್ದೆ ಅಲಂಕರಿಸಿದ್ದ ಎಸ್ ಆಯ್ ಭಟ್ಟ ಅವರು ತಮ್ಮ ಶಿಷ್ಯರಿಗೂ ಶಿಸ್ತಿನ ಬದುಕು ಕಲಿಸಿದ್ದರು. ಅವರು ಹಾಕಿಕೊಟ್ಟ ಪಾಠ ಇಂದಿಗೂ ಎಂ ಇ ಎಸ್ ಕಾಲೇಜಿನಲ್ಲಿ ಅಚ್ಚುಳಿದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಎಸ್ ಆಯ್ ಭಟ್ಟ ಅವರು ಮೆ 3ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.