ಬಡತನವನ್ನು ಮೆಟ್ಟಿ ನಿಂತು ಹೋರಾಟ ಹಾಗೂ ಸಂಘಟನೆ ಮೂಲಕ ರಾಜಕೀಯ ಪ್ರವೇಶಿಸಿ ಜನ ಸೇವೆಯಲ್ಲಿ ತೊಡಗಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ 2025ರ ಜೂನ್ 4ರ ಈ ದಿನ 68ನೇ ಹುಟ್ಟುಹಬ್ಬದ ಸಂಭ್ರಮ. ಲಾರಿ ಚಾಲಕನಾಗಿ ದುಡಿಮೆ ಆರಂಭಿಸಿ ಕಾರ್ಮಿಕ ಸಚಿವರಾಗಿ ಅಧಿಕಾರ ಅನುಭವಿಸಿದವರೆಗೆ ಸಾಕಷ್ಟು ಏಳುಬೀಳುಗಳನ್ನು ಸಮರ್ಥವಾಗಿ ಎದುರಿಸಿದ ಅವರ ಜೀವನ ಅನುಭವ ದೊಡ್ಡದು.
ಬಡ ಜನರ ಬಗ್ಗೆ ಕನಿಕರ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಅವರ ಹುಟ್ಟು ಗುಣ. ಎದುರಾಳಿಯನ್ನು ಸಮರ್ಥವಾಗಿ ಹಣೆಯುವ ಸಾಮರ್ಥ್ಯ, ರಾಜಕೀಯ ತಂತ್ರಗಾರಿಕೆ ಶಿವರಾಮ ಹೆಬ್ಬಾರ್ ಅವರಿಗೆ ಕರಗತ. ವಿರೋಧಿ ಪಕ್ಷದಲ್ಲಿದ್ದವರನ್ನು ತನ್ನ ಕಡೆ ಸೆಳೆಯುವ ಮಾತುಗಾರಿಕೆ, ವೈರಿಯ ಮನಸ್ಸನ್ನು ಸಹ ಗೆಲ್ಲುವ ಹೃದಯ ವೈಶಾಲ್ಯತೆ ಶಿವರಾಮ ಹೆಬ್ಬಾರ್ ಅವರಿಗೆ ಒಲಿದು ಬಂದಿರುವ ಕೌಶಲ್ಯ. ಘಟಾನುಘಟಿ ನಾಯಕರ ಸ್ನೇಹ ಬೆಳಸಿ ಅವರಿಂದಲೂ ಕ್ಷೇತ್ರಕ್ಕೆ ಕೊಡಿಗೆ ಕೊಡಿಸಿದ್ದು ಶಿವರಾಮ ಹೆಬ್ಬಾರ್ ಅವರ ಜಾಣ್ಮೆ. ಕೊರೊನಾ, ನೆರೆ ಪ್ರವಾಹ ಮೊದಲಾದ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಿ ಪರಿಸ್ಥಿತಿ ನಿಭಾಯಿಸಿರುವುದು ಇದೀಗ ಇತಿಹಾಸ!
1957ರ ಜೂನ್ 4ರಂದು ಯಲ್ಲಾಪುರ ಅಂಕೋಲಾ ಗಡಿಭಾಗದ ಶೇವಕಾರದಲ್ಲಿ ಶಿವರಾಮ ಹೆಬ್ಬಾರ್ ಅವರು ಜನಿಸಿದರು. ಕಾವೇರಿ ಹಾಗೂ ಮಹಾಬಲೇಶ್ವರ ಹೆಬ್ಬಾರ ದಂಪತಿಯ ಒಂಬತ್ತು ಮಕ್ಕಳಲ್ಲಿ ಶಿವರಾಮ ಹೆಬ್ಬಾರ್ ಕೊನೆಯವರು. ಬಾಲ್ಯದಲ್ಲಿಯೇ ಅತ್ಯಂತ ಚುರುಕು ಸ್ವಭಾವಹೊಂದಿದ್ದ ಶಿವರಾಮ ಹೆಬ್ಬಾರ್ ಅವರು ರಾಜಕೀಯ ಪ್ರವೇಶಿಸಿದ್ದು ತೀರಾ ಆಕಸ್ಮಿಕ. ರಾಜಕೀಯ ಪ್ರವೇಶದ ನಂತರ ಅವರು ನಡೆದುಬಂದ ದಾರಿ ಅತ್ಯಂತ ರೋಚಕ!
ಸರಿ ಸುಮಾರು ಐದು ವರ್ಷಗಳ ಕಾಲ ಲಾರಿ ಚಾಲಕರಾಗಿ ಶಿವರಾಮ ಹೆಬ್ಬಾರ್ ಕೆಲಸ ಮಾಡಿದರು. ಕಾರ್ಮಿಕ ವರ್ಗದ ಕಷ್ಟಗಳನ್ನು ಅರಿತರು. ಅದಾದ ನಂತರ ಗುಳ್ಳಾಪುರದ ಶ್ರೀಕಾಂತ ಶೆಟ್ಟಿ ಹಾಗೂ ವಿಜಿ ನಾಯ್ಕ ಅವರ ಜೊತೆ ಸೇರಿ ಟಿಂಬರ್ ವ್ಯವಹಾರಕ್ಕೆ ಕೈ ಹಾಕಿದರು. ಅಲ್ಲಿ ದೊರೆತ ಹಣವನ್ನು ಸಾಮಾಜಿಕ ಚಟುವಟಿಕೆಗಳಿಗೆ ಬಳಿಸಿದರು. ಅರಬೈಲು, ಇಡಗುಂದಿ, ಗುಳ್ಳಾಪುರ ಮೊದಲಾದ ಕಡೆ ಸರಬರಾಜು ಆಗುತ್ತಿದ್ದ ಅಕ್ರಮ ಸರಾಯಿ ವಿರುದ್ಧ ಶಿವರಾಮ ಹೆಬ್ಬಾರ್ ಧ್ವನಿಯಾದರು. ಅವರ ಸಾಮಾಜಿಕ ಕಾಳಜಿ ನೋಡಿದ ಶ್ರೀಕಾಂತ ಶೆಟ್ಟಿ ಅವರು ಹೆಬ್ಬಾರ್ ಅವರನ್ನು ರಾಜಕೀಯಕ್ಕೆ ಆಮಂತ್ರಿಸಿದರು. ಸಂಘಟನೆ ಹಾಗೂ ನಾಯಕತ್ವದ ಗುಣ ಬೆಳೆಸಿಕೊಂಡಿದ್ದ ಶಿವರಾಮ ಹೆಬ್ಬಾರ್ ಅವರು 1983 ಆಗಸ್ಟ್ 12ರಂದು ಯಲ್ಲಾಪುರ ಎ ಪಿ ಎಂ ಸಿ ಮೂಲಕ ರಾಜಕೀಯ ಪ್ರವೇಶಿಸಿದರು. ಎಪಿಎಂಸಿ ಅಧ್ಯಕ್ಷರಾಗಿ 10 ವರ್ಷ ಸೇವೆ ಮಾಡಿದರು. ಅದಾದ ನಂತರ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅವರು ಇದೀಗ ಆ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಅವರು ಗುರುತಿಸಿಕೊಂಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರಾಗಿ 6 ವರ್ಷ ಸಂಘಟನೆ ಮಾಡಿದ ಶಿವರಾಮ ಹೆಬ್ಬಾರ್ ಅವರು 2001ರಲ್ಲಿ ತಮ್ಮ ಅನುಯಾಯಿಗಳ ಜೊತೆ ಕಾಂಗ್ರೆಸ್ ಸೇರಿದರು. ಯಲ್ಲಾಪುರ, ಮುಂಡಗೋಡ, ಬನವಾಸಿ, ಶಿರಸಿ, ಅಂಕೋಲಾದ ಮೂಲೆ ಮೂಲೆ ಸಂಚರಿಸಿ ಕಾಂಗ್ರೆಸ್ ಪಕ್ಷ ಸಂಘಟಿಸಿದರು. 2008ರಲ್ಲಿ ಮೊದಲ ಬಾರಿಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ, ಆಗಿನ ಬಿಜೆಪಿ ಅಭ್ಯರ್ಥಿ ವಿ ಎಸ್ ಪಾಟೀಲ್ ವಿರುದ್ಧ ಅವರು ಸೋತರು. ಸೋತ ಮಾತ್ರಕ್ಕೆ ಶಿವರಾಮ ಹೆಬ್ಬಾರ್ ಜನ ಸೇವೆ ಬಿಡಲಿಲ್ಲ. ಓದುವ ಮಕ್ಕಳಿಗೆ ಆರ್ಥಿಕ ನೆರವು ಸೇರಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿದರು. ಅದರ ಪರಿಣಾಮ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ ಎಸ್.ಪಾಟೀಲ ಅವರನ್ನು ಸೋಲಿಸಿ ಶಾಸಕರಾದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಹ ಮತ್ತೊಮ್ಮೆ ವಿ ಎಸ್ ಪಾಟೀಲ್ ಅವರ ವಿರುದ್ಧ ಗೆಲುವು ಸಾಧಿಸಿದರು.
ಈ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹುದ್ದೆಯನ್ನು ನೀಡಿತು. 6 ತಿಂಗಳು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಹೆಬ್ಬಾರ್ ಸೇವೆ ಸಲ್ಲಿಸಿದ್ದಾರೆ. 2019ರ ಅವಧಿಯಲ್ಲಿ ಬಿಜೆಪಿ ಸೇರಿದ ಶಿವರಾಮ ಹೆಬ್ಬಾರ್ ಉಪಚುನಾವಣೆ ಎದುರಿಸಿದರು. ಗೆದ್ದ ನಂತರ ಕಾರ್ಮಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಸಚಿವರಾಗಿ ರಾಜ್ಯದ ಎಲ್ಲಡೆ ಸಂಚರಿಸಿದರು. ಆ ವೇಳೆ ಕೊರೊನಾ ಕಾಟ ಜೋರಾಗಿದ್ದು, ಯಲ್ಲಾಪುರ ಆಸ್ಪತ್ರೆಯನ್ನು ಮಾದರಿಯನ್ನಾಗಿ ಮಾಡಿದರು. 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಶಿವರಾಮ ಹೆಬ್ಬಾರ್ ಅಲ್ಲಿಯೂ ಗೆಲುವು ಸಾಧಿಸಿದರು. ಆದರೆ, ಚುನಾವಣೆ ಮರುದಿನವೇ ಅವರು ಸ್ವ ಪಕ್ಷದ ಸ್ಥಳೀಯ ಕಾರ್ಯಕರ್ತರ ವಿರುದ್ಧ ಮುನಿಸಿಕೊಂಡಿದ್ದು, ಅಂತರ ಕಾಯ್ದುಕೊಂಡಿದ್ದರು. ಅದಾಗಿಯೂ ತಮ್ಮದೇ ಆದ ಬಳಗ ಸೃಷ್ಠಿಸಿಕೊಂಡು ಜನರ ಆಗು-ಹೋಗುಗಳಿಗೆ ಸ್ಪಂದಿಸುತ್ತಿದ್ದರು. ಈಚೆಗೆ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದರೂ ಅವರು ಕಿಂಚಿತ್ತು ಕುಗ್ಗಲಿಲ್ಲ. ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ.
`ಶಿವರಾಮ ಹೆಬ್ಬಾರ್ ಅವರು ತಮ್ಮೊಂದಿಗೆ ಇತರರನ್ನು ಬೆಳೆಸಿದ್ದಾರೆ. ಕಷ್ಟ ಎಂದು ಅವರ ಬಳಿ ಹೋದ ಯಾರನ್ನು ಅವರು ಸುಮ್ಮನೆ ಕಳುಹಿಸುವುದಿಲ್ಲ’ ಎಂದು ಶಿವರಾಮ ಹೆಬ್ಬಾರ್ ಅವರ ಅಪ್ಪಟ್ಟ ಅಭಿಮಾನಿಯೂ ಆದ ವಿಕಾಸ ಬ್ಯಾಂಕಿನ ಉಪಾಧ್ಯಕ್ಷ ನರಸಿಂಹ ಭಟ್ಟ ಬೋಳಪಾಲ್ ವಿವರಿಸಿದರು. `ರಿಕ್ಷಾ ಚಾಲಕರು, ಕೂಲಿ ಕಾರ್ಮಿಕರು ಸೇರಿ ಅನೇಕರಿಗೆ ಶಿವರಾಮ ಹೆಬ್ಬಾರ್ ಅವರು ನೆರವಾಗಿದ್ದಾರೆ. ಪುಠಾಣಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರಿಗೂ ಅವರು ಗೌರವದಿಂದ ನಡೆದುಕೊಳ್ಳುತ್ತಾರೆ’ ಎಂದು ಯಲ್ಲಾಪುರ ಟಾಕ್ಸಿ ಮತ್ತು ಲಾರಿ ಚಾಲಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಹಾಗೂ ಯಲ್ಲಾಪುರ ತಾಲೂಕಿನ ಕರವೇ ಘಜನೇಸೆ ಅಧ್ಯಕ್ಷ ಶ್ಯಾಮ್ ಮಾರ್ಕರ್ ಹೇಳಿದರು. `ಶಿವರಾಮ ಹೆಬ್ಬಾರ್ ಕೇವಲ ವ್ಯಕ್ತಿಯಲ್ಲ. ಅವರೊಬ್ಬ ಶಕ್ತಿ’ ಎಂದು ಮಂಜುನಾಥ ಹೆಗಡೆ ಅವರು ಬಣ್ಣಿಸಿದರು.