ಮರದೊಳಗೆ ಗುಹೆ ನಿರ್ಮಿಸಿ 30ಕ್ಕೂ ಅಧಿಕ ಜನರಿಗೆ ಆಶ್ರಯ ನೀಡುವಷ್ಟು ವಿಶಾಲ ವಿಸ್ತೀರ್ಣವನ್ನು ಹೊಂದಿದ `ಅಮರ ವೃಕ್ಷ’ ಬೆಳೆಸಲು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ಆಸಕ್ತಿವಹಿಸಿದೆ. ಇಲ್ಲಿನ ನರ್ಸರಿಗಳಲ್ಲಿ 300ರಷ್ಟು ಗಿಡಗಳನ್ನು ಬೆಳೆಸಲಾಗಿದ್ದು, ಅದರ ಆರೈಕೆ ನಡೆದಿದೆ.
ಭಗವಾನ್ ಶ್ರೀಕೃಷ್ಣ ಈ ಗಿಡವನ್ನು ಭೂಮಿಗೆ ತಂದ ಎಂಬ ಮಾತಿದೆ. ಹೀಗಾಗಿ 5 ಸಾವಿರಕ್ಕೂ ಅಧಿಕ ವರ್ಷ ಜೀವಿಸುವ `ಅಮರ ವೃಕ್ಷ’ ದೇವಾಲಯಗಳ ಮುಂದೆ ಬೆಳೆಸಲು ಅತ್ಯಂತ ಯೋಗ್ಯ. ಈ ಒಂದು ಗಿಡ ಮರವಾಗಿ ತನ್ನ ಜೀವಿತ ಅವಧಿಯಲ್ಲಿ ಲಕ್ಷಾಂತರ ಜೀವಿಗಳಿಗೆ ನೆರವಾಗುತ್ತದೆ. ಸದ್ಯ ಕರ್ನಾಟಕದಲ್ಲಿ 800 ವರ್ಷ ಹಳೆಯದಾದ ಮರವೊಂದು ಇದ್ದು, ಅದು ಸಹ ಗಜಗಾತ್ರದಲ್ಲಿ ಬೆಳೆದಿದೆ.
ಆಫ್ರಿಕಾದ ಸನಗಲ್’ನಲ್ಲಿರುವ ಶಿರಸಿಯ ನಾಡ್ಗುಳಿಯ ಬ್ರಿಜೇಶ್ ಹೆಗಡೆ ಅವರು ಪರಿಸರ ಬರಹಗಾರ ಶಿವಾನಂದ ಕಳವೆ ಅವರಿಗೆ ಈ ಗಿಡದ ಬೀಜ ಒದಗಿಸಿದ್ದಾರೆ. ಶಿವಾನಂದ ಕಳವೆ ಅವರು ಯಲ್ಲಾಪುರ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಹಾಗೂ ಉಪವಲಯ ಅರಣ್ಯಾಧಿಕಾರಿ ಮನೋಜ್ ದೇಶಭಾಗ್ ಅವರಿಗೆ ಬೀಜ ಹಸ್ತಾಂತರಿಸಿದ್ದು, ಅದು ನರ್ಸರಿಯಲ್ಲಿ ಮೊಳಕೆಯೊಡೆದಿದೆ. ಗಿಡದ ಬೆಳವಣಿಗೆ ಸಹ ಉತ್ತಮವಾಗಿದ್ದು, ನಾಟಿಗೂ ಸಿದ್ಧಗೊಂಡಿದೆ.
ಈ ಮರದ ಕಾಂಡದ ಸುತ್ತಳತೆ 30 ಮೀಟರ್‌ಗಿಂತ ದೊಡ್ಡದಾಗಿದೆ. ಮರದ ಒಳಭಾಗ ಮೃದುವಾಗಿರುವುದರಿಂದ ಆಫ್ರಿಕಾದ ಕೆಲವು ಭಾಗಗಳಲ್ಲಿ ಮರದ ಪೊಟರೆಗಳಲ್ಲಿ ಜನ ವಾಸಿಸುತ್ತಾರೆ. ಆಫ್ರಿಕಾದ ಬೆಂಗಾಡಿನ ಹನಿ ನೀರಿಲ್ಲದ ಪ್ರದೇಶವಾದ `ಕೊಡೋಫಾನ’ ಎಂಬಲ್ಲಿ ವಾಸವಾಗಿರುವ ಕುಟುಂಬದವರು ನೀರಿಗಾಗಿ ಈ ಮರವನ್ನು ನಂಬಿದ್ದಾರೆ. ಬೃಹತ್ ಮರದ ಕಾಂಡದ ಒಳಭಾಗದ ತಿರುಳು ತೆಗೆದರೆ ಆ ಟೊಳ್ಳಿನ ಮೂಲಕ ಬರಗಾಲದಲ್ಲಿಯೂ ನೀರು ಸಿಗುತ್ತದೆ. ಒಂದೊAದು ಮರದ ಟೊಳ್ಳಿನಲ್ಲಿ 5000 ಲೀಟರ್ ನೀರು ಸಂಗ್ರಹ ಸಾಧ್ಯ.
ಸೌತೆಕಾಯಿ ಗಾತ್ರದ ಹುಳಿ ರುಚಿಯ ಈ ಮರದ ಹಣ್ಣು ಆಹಾರವಾಗಿ ಬಳಕೆಯಾಗುತ್ತದೆ. ಜ್ವರ ಆಮಶಂಕೆ ಉದರಬೇನೆಗೆ ಸಸ್ಯ ಔಷಧವಾಗಿದೆ. ಮರದ ತೊಗಟೆಯಿಂದ ನಾರು ತೆಗೆದು ಬಟ್ಟೆ, ಚೀಲ ಹಗ್ಗ, ಸಂಗೀತ ವಾದ್ಯಗಳ ಧಾರವಾಗಿ ಬಳಸಲಾಗುತ್ತದೆ. ಬೀಜದಿಂದ ತೆಗೆದ `ರನಿಯಲ್’ ಎಂಬ ಎಣ್ಣೆಯಿಂದ ದೀಪ ಉರಿಸಲಾಗುತ್ತದೆ. ಮರವನ್ನು ನಾಶ ಮಾಡದೆ ಇವೆಲ್ಲವನ್ನೂ ಸುಸ್ಥಿರವಾಗಿ ಪಡೆಯಲಾಗುತ್ತದೆ. ಬಹುಪಯೋಗಿಯಾದ ಈ ಮರವನ್ನು ಆಫ್ರಿಕಾದ ಕಲ್ಪವೃಕ್ಷವೆಂದು ಕರೆಯಲಾಗುತ್ತದೆ.
ರಾಜ್ಯದ ಸವಣೂರಿನ ಕಲ್ಮಠ, ರಾಮದುರ್ಗದ ಕಟ್ಕೋಳ, ವಿಜಯಪುರ, ಬೆಂಗಳೂರಿನ ಲಾಲ್ ಬಾಗ್ ಸೇರಿ ಕೆಲವು ಕಡೆ ಈ ಗಿಡ ಮರವಾಗಿದೆ. ಈ ಮರದ ಕುರಿತು ಹಿರಿಯ ಪರಿಸರ ಬರಹಗಾರ ಎಚ್ ಆರ್ ಕೃಷ್ಣಮೂರ್ತಿ ಅವರು ಸಂಶೋಧನಾ ಲೇಖನ ಬರೆದಿದ್ದಾರೆ. ಅದರಲ್ಲಿ ಅನೇಕ ಸ್ವಾರಸ್ಯಕರ ವಿಷಯವನ್ನು ಅವರು ಹಂಚಿಕೊoಡಿದ್ದಾರೆ. ಫ್ರೆಂಚ್ ಸಸ್ಯಶಾಸ್ತ್ರಜ್ಞ ಅಡಾನ್ಸನ್ ಗುರುತಿಸಿ ಅಧ್ಯಯನ ಮಾಡಿದ ಆಫ್ರಿಕಾ ದೇಶದ ಮರ ಇದಾಗಿದೆ. `ಅಡನ್ಸೋನಿಯಾ ಡಿಜಿಟೇಟಾ’ ಎಂಬುದು ಈ ಗಿಡದ ವೈಜ್ಞಾನಿಕ ಹೆಸರು. ಆಫ್ರಿಕಾ ಅನ್ವೇಷಣೆ ಕೈಗೊಂಡಿದ್ದ ಲಿವಿಂಗ್ ಸ್ಟನ್ ಈ ಮರವನ್ನು ಪ್ರಪಂಚದ ಎಂಟನೇ ಅದ್ಭುತ ಎಂದು ಬಣ್ಣಿಸಿದ್ದಾರೆ.
ಕರ್ನಾಟಕದಲ್ಲಿ ಇದಕ್ಕೆ ಸೀಮೆ ಹುಣಸೆ, ದೊಡ್ಡ ಹುಣಸೆ, ಮಗಿಮಾವು, ಮಂಕಿ ಬ್ರೇಡ್ ಮುಂತಾದ ಹೆಸರುಗಳಿವೆ. ರಾಜ್ಯದ ಸವಣೂರಿನಲ್ಲಿ ಈಗಿರುವ ಮೂರು ಮರಗಳನ್ನು ನಾಥಪಂಥದ ಗುರುಗಳು 500.ವರ್ಷಕ್ಕೂ ಹಿಂದೆ ನಾಟಿ ಮಾಡಿದ ಪ್ರತೀತಿ ಇದೆ. ಇಂದಿಗೂ ಮಹಾರಾಷ್ಟ್ರ ಉತ್ತರ ಪ್ರದೇಶದ ನಾಥಪಂಥೀಯರು ಸವಣೂರಿಗೆ ಮಹಾಮರ ದರ್ಶನಕ್ಕೆ ಬರುತ್ತಾರೆ. ಸದ್ಯ 300 ಗಿಡಗಳು ಮಾತ್ರ ಲಭ್ಯವಿದ್ದು, ಆಸಕ್ತರಿಗೆ ಅದು ಉಚಿತ. ದೇವಾಲಯ, ಉದ್ಯಾನವನ ಸೇರಿ ವಿಶಾಲ ಪ್ರದೇಶದಲ್ಲಿ ಗಿಡ ಬೆಳೆಯಲು ಸೂಕ್ತ.
ಪವಿತ್ರ ವೃಕ್ಷದ ಪುಟ್ಟ ಅಭಿಯಾನ – ಅಮರ ವೃಕ್ಷ ನಾವು ನೆಡೋಣ
`ಅಮರ ವೃಕ್ಷ’ ಅಗತ್ಯವಿರುವವರು ಈಗಲೇ ಫೋನ್ ಮಾಡಿ
ಶಿವಾನಂದ ಕಳವೆ 9448023715
ಅಥವಾ
ಮನೋಜ್ ದೇಶಭಾಗ್ 9916692913