ಹಳಿಯಾಳದ `ತಗಡು ಬಿರಿಯಾನಿ’ ಎಂಬಲ್ಲಿ ಚಿಕನ್ ಕೇಳಿದ ಗ್ರಾಹಕರಿಗೆ ಗೋ ಮಾಂಸ ನೀಡಲಾಗಿದೆ. ಇದನ್ನು ವಿರೋಧಿಸಿ ನೂರಾರು ಜನ ಹೊಟೇಲ್ ಮುಂದೆ ಜಮಾಯಿಸಿ ಆಕ್ರೋಶವ್ಯಕ್ತಪಡಿಸಿದರು.
ಬುಧವಾರ ಸಂಜೆ ಮೂವರು ಸ್ನೇಹಿತರು `ನ್ಯೂ ಹೊಟೆಲ್ ಹುಬ್ಬಳ್ಳಿ ತಗಡ ಬಿರಿಯಾನಿ’ ಹೊಟೇಲಿಗೆ ಬಂದಿದ್ದರು. ಎಂದಿನ0ತೆ ಅವರು ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ, ಹೊಟೇಲಿನವರು ಅವರಿಗೆ ಗೋಮಾಂಸದ ಜೊತೆ ಬಿರಿಯಾನಿ ನೀಡಿದ್ದರು. ಮೊದಲು ಆ ಸ್ನೇಹಿತರಿಗೆ ಅದರ ಅರಿವಾಗಲಿಲ್ಲ. ಅದಾದ ನಂತರ ಋಚಿಯಲ್ಲಿ ಬದಲಾವಣೆ ಆದ ಬಗ್ಗೆ ಹೊಟೇಲ್ ಸಿಬ್ಬಂದಿಗೆ ಪ್ರಶ್ನಿಸಿದರು. ಆಗಲೂ ಹೊಟೇಲಿನವರು ಸರಿಯಾಗಿ ಉತ್ತರಿಸಲಿಲ್ಲ.
ಕೊನೆಗೆ ಮತ್ತೊಬ್ಬರು ಅಲ್ಲಿಗೆ ಆಗಮಿಸಿ ಹೊಟೇಲಿನವರು ಗೋಮಾಂಸದ ಜೊತೆ ಬಿರಿಯಾನಿ ಕೊಡುತ್ತಿರುವ ಬಗ್ಗೆ ವಿವರಿಸಿದರು. ಚಿಕನ್ ತಿನ್ನಲು ಹೋಗಿ ಗೋಮಾಂಸ ಭಕ್ಷಿಸಿದ ಪಾಪಪ್ರಜ್ಞೆ ಆ ಮೂವರು ಸ್ನೇಹಿತರಿಗೆ ಕಾಡಿತು. ಹೀಗಾಗಿ ಗಲಾಟೆ ಮಾಡಿ ಹೊಟೇಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹೊಟೇಲ್ ಸಿಬ್ಬಂದಿ ಸ್ಪಂದಿಸದೇ ಇದ್ದಾಗ ಹೊಟೇಲ್ ಮಾಲಕರನ್ನು ಸ್ಥಳಕ್ಕೆ ಕರೆಯಿಸಿದರು. ಆಗ ಹೊಟೇಲಿನವರು `ನಮಗೆ ಪರಮಿಶನ್ ಇದೆ’ ಎಂದು ಉಡಾಪೆಯಿಂದ ಮಾತನಾಡಿದರು.
ಈ ವಿಷಯ ದೊಡ್ಡದಾಗುತ್ತಿದ್ದ ಹಾಗೇ ಇನ್ನಷ್ಟು ಜನ ಅಂಗಡಿ ಮುಂದೆ ಜಮಾಯಿಸಿದರು. ಪೊಲೀಸರು ಸಹ ಅಲ್ಲಿಗೆ ಬಂದರು. ಹೊಟೇಲ್ ಮಾಲಕ ಅನುಚಿತವಾಗಿ ವರ್ತಿಸಿದ ಬಗ್ಗೆ ಜನ ದೂರಿದರು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ್ದು, ಪುರಸಭೆ ಹಾಗೂ ಆರೋಗ್ಯಾಧಿಕಾರಿಗಳು ಹೊಟೇಲಿನಲ್ಲಿದ್ದ ಆಹಾರ ತಯಾರಿಕಾ ಸಾಮಗ್ರಿಗಳನ್ನು ಜಪ್ತು ಮಾಡಿದರು. ಸದ್ಯ ಜಪ್ತು ಮಾಡಿದ ಸಾಮಗ್ರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.