ಸ್ಮಶಾನದಲ್ಲಿದ್ದ ಆಲದ ಮರ ಕಡಿದು ವಿವಾದಕ್ಕೆ ಒಳಗಾಗಿದ್ದ ಅಂಕೋಲಾ ಪುರಸಭೆ ಅಧಿಕಾರಿಗಳು ಗುರುವಾರ ಕಡಿದ ಮರವನ್ನು ಮತ್ತೆ ನಾಟಿ ಮಾಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದ್ದಾರೆ.
ಇಲ್ಲಿನ ಹಿಂದು ಸ್ಮಶಾನ ಭೂಮಿಯಲ್ಲಿ ಆಲದ ಮರವೊಂದು ಬೆಳೆದಿತ್ತು. ಆ ಮರದಿಂದ ಯಾರಿಗೂ ತೊಂದರೆ ಉಂಟಾಗಿರಲಿಲ್ಲ. ಅದಾಗಿಯೂ ಪುರಸಭೆ ಅಧಿಕಾರಿಗಳು ಮೊನ್ನೆ ಆ ಮರವನ್ನು ಕಡಿದಿದ್ದರು. ಕಡಿಯುವ ಮುನ್ನ ಅರಣ್ಯ ಇಲಾಖೆಗೆ ಸಹ ಮಾಹಿತಿ ನೀಡಿರಲಿಲ್ಲ. ಅಗತ್ಯ ಅನುಮತಿಯನ್ನು ಪಡೆದಿರಲಿಲ್ಲ. ಆ ಆಲದ ಮರದ ಜೊತೆ ಇನ್ನಿತರ ಗಿಡಗಳನ್ನು ಸಹ ಪುರಸಭೆಯವರು ಬೋಳಿಸಿದ್ದರು. ಕಾಂಡದ ಬಳಿ ಗಿಡಗಳನ್ನು ಕತ್ತರಿಸಿದ ಬಗ್ಗೆ ಸಾಕಷ್ಟು ಆಕ್ಷೇಪಗಳುವ್ಯಕ್ತವಾಗಿದ್ದವು.
ಸ್ಮಶಾನದಲ್ಲಿದ್ದ ಮರ ಕಟಾವು ನಡೆಸಿದ ಬಗ್ಗೆ ಸ್ಮಶಾನ ಭೂಮಿ ಅಭಿವೃದ್ಧಿ ಸಮಿತಿಯವರು ಸಹ ಆಕ್ಷೇಪವ್ಯಕ್ತಪಡಿಸಿದ್ದರು. ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶಹೊರಹಾಕಿದ್ದರು. ಇದರಿಂದ ಸಿಕ್ಕಿಬಿದ್ದ ಆ ಅಧಿಕಾರಿಗಳು ತಮ್ಮ ತಪ್ಪು ಮುಚ್ಚುವುದಕ್ಕಾಗಿ ಕುತಂತ್ರ ಮಾಡಿದರು. ಗುರುವಾರ ಜೆಸಿಬಿ ಯಂತ್ರವನ್ನು ಸ್ಮಶಾನದ ಒಳಗೆ ನುಗ್ಗಿಸಿ ಕಡಿದಿದ್ದ ಆಲದ ಮರವನ್ನು ಮತ್ತೆ ನಿಲ್ಲಿಸಿದರು!
ಮೂರು ದಿನದ ಹಿಂದೆ ಕಡಿದ ಮರ ಒಣಗಿದ್ದು, ಅದನ್ನು ಸಹ ಗಮನಿಸದೇ ಪುರಸಭೆ ಸಿಬ್ಬಂದಿ ಬುಡವನ್ನು ಮಣ್ಣಿನಲ್ಲಿ ಹೂತರು. ಮರದ ಬುಡಚಿ ಕಾಣದಂತೆ ಅದನ್ನು ಮಣ್ಣಿನ ಆಳದಲ್ಲಿ ಅಡಗಿಸಿಟ್ಟರು. ಈ ಎಲ್ಲಾ ಕೆಲಸಗಳಿಗೆ ಜೆಸಿಬಿ ಯಂತ್ರ ಬಳಸಿದ್ದು, ಪುರಸಭೆ ಅನುಕೂಲಕ್ಕೆ ಪಡೆದಿದ್ದ ಜೆಸಿಬಿ ಯಂತ್ರವನ್ನು ಸಹ ಇಲ್ಲಿ ದುರುಪಯೋಗಪಡಿಸಿದ ಆರೋಪ ಕೇಳಿಬಂದಿದೆ. `ಮುಖ್ಯಾಧಿಕಾರಿಗಳ ಅನುಮತಿ ಮೇರೆಗೆ ಕಡಿದ ಮರ ಮತ್ತೆ ನೆಡಲಾಗಿದೆ’ ಎಂದು ಸಿಬ್ಬಂದಿ ಹೇಳಿದ್ದಾರೆ.





